Belagavi NewsBelgaum NewsKannada NewsKarnataka NewsPolitics

*ಕೋಳಿ ಬೆಸ್ತ ಸಮಾಜ ಎಸ್ಟಿ ಸೇರ್ಪಡೆಗಾಗಿ ಧ್ವನಿ ಎತ್ತುತ್ತೇನೆ: ಸಂಸದೆ ಪ್ರಿಯಂಕಾ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಕೋಳಿ ಬೆಸ್ತ ಸಮಾಜವನ್ನು ಎಸ್ಟಿ ಸಮಾಜಕ್ಕೆ ಸೇರಿಸುವುದಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದು ಚಿಕ್ಕೋಡಿ ಲೋಕಸಭೆ ಸದಸ್ಯೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.

ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿರುವ ಮನೀಷ ಇಂಟನ್ಯಾಷನಲ್ ಹೋಟೆಲ್ ಬಳಿಯ ಎಸ್ ಎಸ್ ಕನ್ವೆನ್ಷನ್ ಹಾಲ್ ನಲ್ಲಿ ಕೋಳಿ ಬೆಸ್ತ ಸಮಾಜ ಜಿಲ್ಲಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೂಡ ಕೋಳಿ- ಬೆಸ್ತ ಸಮಾಜವನ್ನು ಎಸ್ಟಿ ಸಮಾಜಕ್ಕೆ ಸೇರಿಸಬೇಕೆಂಬ ನಿಲುವು ಹೊಂದಿದ್ದಾರೆ. ನಾನು ಕೂಡ ಸದಾ ನಿಮ್ಮ ಸಮಾಜದ ಪ್ರಗತಿಯನ್ನು ಬಯಸುತ್ತೇನೆಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ 45 ದಿನಗಳ ನನ್ನ ಪ್ರಚಾರ ಸಭೆಯಲ್ಲಿ ಮಹಿಳೆಯರು ನನ್ನ ಬಳಿ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಹಿಳೆಯರ ಅಭಿಪ್ರಾಯದಂತೆ  ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕೆಂಬುವುದು ನನ್ನ ಆಶಯ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 30 ವಯಸ್ಸು ಕ್ಕಿಂತ ಕಡಿಮೆ ವಯಸ್ಸಿನವರು ನನ್ನನ್ನು ಸೇರಿ ಐದು ಜನ ಮಹಿಳೆಯರು ಸಂಸತ್ತಿನಲ್ಲಿ ಕಾಲಿಟ್ಟಿದ್ದು ಖುಷಿಯ ಸಂಗತಿ ಎಂದರು.

ಇಂದು ಮಹಿಳೆಯರು ಸ್ವ ಶಕ್ತಿಯಿಂದ ಸಮಾಜದಲ್ಲಿ ಮುನ್ನುಗ್ಗುತ್ತಿದ್ದಾರೆ. ಆದ್ದರಿಂದ ಮಹಿಳೆಯರನ್ನು ತಂದೆ, ತಾಯಿ, ಕುಟುಂಬಸ್ಥರು ಸೇರಿದಂತೆ ಸರ್ವರೂ ಮಹಿಳೆಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದರು.

ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ್ ಕುಮಾರ್ ಕುರಂದವಾಡೆ ಮಾತನಾಡಿ, ನಮ್ಮ ಸಮಾಜದ ಮಹಿಳಾ ಸಂಘಟನೆಯನ್ನು ಸಂಘಟಿಸಿ, ಮಹಿಳೆಯರನ್ನು ಸದೃಢಗೊಳಿಸಬೇಕೆಂದು ಇಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಹಿಂದುಳಿದ ಸಮಾಜವನ್ನು ಮೇಲೆ ಎತ್ತಬೇಕೆಂದು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ದುಡಿಯುತ್ತಿದ್ದಾರೆ. ನಮ್ಮ ಸಮಾಜಕ್ಕೂ ಸತೀಶ್ ಜಾರಕಿಹೊಳಿ ಅವರು ಬೆನ್ನೆಲುಬು ಆಗಿ ನಿಂತಿದ್ದಾರೆಂದು ತಿಳಿಸಿದರು.

ಮಾಜಿ ಜಿಪಂ ಸದಸ್ಯ ಸಿದ್ದು ಸುಣಗಾರ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಗೆದ್ದು ಚಿಕ್ಕ ವಯಸ್ಸಿನಲ್ಲೇ ಪ್ರಿಯಂಕಾ ಜಾರಕಿಹೊಳಿ ಅವರು ರಾಜ್ಯದಲ್ಲಿಯೇ ಇತಿಹಾಸ ನಿರ್ಮಿಸಿದ್ದಾರೆ. ಅವರಿಗೆ ನಮ್ಮ ಸಮಾಜದಿಂದ ಸನ್ಮಾನ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.

ಇನ್ನು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೋಳಿ- ಬೆಸ್ತ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹೀಗಾಗಿ ಸದಾ ನಮ್ಮ ಸಮಾಜ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಪರವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ಮಾತನಾಡಿ, ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷರಾಗಿ ದಿಲೀಪ್ ಕುಮಾರ ಕುರಂದವಾಡೆ ಅವರು ಆಯ್ಕೆಯಾದ ನಂತರ ಸಂಘದ ಚಟುವಟಿಕೆಗಳು ಚುರುಕುಗೊಂಡಿವೆ ಎಂದು ತಿಳಿಸಿದರು.

ಮಹಿಳೆಯರನ್ನು ಪೂಜಿಸುವ ದೇಶ ನಮ್ಮದಾಗಿದೆ. ಇಂದು  ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಮಾಜದ ಮಹಿಳೆಯರು ಸಾಧನೆಯತ್ತ ಮುನ್ನುಗ್ಗಬೇಕೆಂದರು ಕರೆ ನೀಡಿದರು.

ಇದೇ ವೇಳೆ ಕೋಳಿ ಬೆಸ್ತ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಬೇಕೆಂದು ಸಮಾಜದ ಬಾಂಧವರು ಕೋರಿದರು.

ಕೋಳಿ ಬೆಸ್ತ ಸಮಾಜದ ಹುಕ್ಕೇರಿ ತಾಲೂಕು ಅಧ್ಯಕ್ಷ ಕಿಶೋರ್ ಶಿರಗೆ ಸ್ವಾಗತಿಸಿದರು

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕೋಳಿ ಬೆಸ್ತ ಸಮಾಜದ ಉಪಾಧ್ಯಕ್ಷ

ಭಗವಾನ್ ಕೋಳಿ, ಬಸವರಾಜ ಸುಣಗಾರ, ವಕೀಲರಾದ ಸಂಜಯ ಪಾಟೀಲ್, ಮಹಾದೇವ ಬೋನಿ, ಶಿವನಿಂಗ ನಾಯಕ, 

ಸಂಗೀತಾ ಕೋಳಿ ಸೇರಿದಂತೆ ಸಮಾಜದ ನೂರಾರು ಮುಖಂಡರು, ಅಪಾರ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button