Latest

 8 -9ನೇ ತರಗತಿ ವಿದ್ಯಾರ್ಥಿಗಳಿಗೂ ರೈತ ವಿದ್ಯಾನಿಧಿ ವಿಸ್ತರಣೆ; ವಿಜಯಪುರಕ್ಕೆ ಹಲವು ಯೋಜನೆ; ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ; ಮನದಾಳದ ಯೋಜನೆಗಳನ್ನು ತೆರೆದಿಟ್ಟ ಬೊಮ್ಮಾಯಿ; ಯತ್ನಾಳ್ ಹಾಡಿ ಹೊಗಳಿದ ಸಿಎಂ

ಪ್ರಗತಿವಾಹಿನಿ ಸುದ್ದಿ, ವಿಜಯಪುರ :- ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹೈಸ್ಕೂಲ್ ಹೋಗಲು ಹಾಗೂ ಹೈಸ್ಕೂಲ್ ನಿಂದ ಪಿಯುಸಿ ಮಾಡುವ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ರೈತರ ವಿದ್ಯಾನಿಧಿಯನ್ನು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡುಬೇಕೆನ್ನುವ ಬಗ್ಗೆ ತೀರ್ಮಾನ ಮಾಡಿದ್ದು, ಈ ಬಗ್ಗೆ ಕೂಡಲೇ ಆದೇಶ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಇಂದು ಅವರು ವಿಜಯಪುರ ಜಿಲ್ಲೆಯಲ್ಲಿ ಲೋಕೋಪಯೋಗಿ, ಕಂದಾಯ, ವಸತಿ, ಪ್ರವಾಸೋದ್ಯಮ, ಆರೋಗ್ಯ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ 11 ಇಲಾಖೆಗಳ ಸುಮಾರು 244 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಮಾತನಾಡಿದರು.

ವಿಜಯಪುರ ಜಿಲ್ಲೆಯ ಜನರು ಅತ್ಯಂತ ಕಠಿಣ ಪರಿಶ್ರಮ ಪಡುವ ಕಾಯಕಯೋಗಿಗಳು, ಪ್ರಮಾಣಿಕರು, ನೇರ ನುಡಿಯವರು ಹೀಗಾಗಿ ವಿಜಯಪುರ ಜಿಲ್ಲೆ ನೇರ ನುಡಿಯ, ಗಂಡು ಮೆಟ್ಟಿದ ಪ್ರಾಮಾಣಿಕ ಸ್ಥಳ ಇಂದಿನ ವಿಜಯಪುರ. ಈ ಸ್ಥಳದಲ್ಲಿ ಪ್ರತಿನಿಧಿಸುವ ವ್ಯಕ್ತಿಗಳು ಡಬಲ್ ಇಂಜಿನ್ ಹೊಂದಿದವರು. ಬಸನಗೌಡ ಪಾಟೀಲ್ ಯತ್ನಾಳ ಅವರು ಕೂಡ ಅಂತ ನಾಯಕರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಜಿಲ್ಲೆಯ ಜನರಿಗೆ ನ್ಯಾಯ ಒದಗಿಸುವ ಕಾಲ ಕೂಡಿ ಬಂದಿದ್ದು, ಕಳೆದ 5 ದಶಕಗಳಿಂದ ತ್ಯಾಗ ಮಾಡಿ, ಈ ಭಾಗದ ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ನಿಟ್ಟಿನಲ್ಲಿ ಇಲ್ಲಿನ ಹಿರಿಯರು ತಮ್ಮ ಜಮೀನು, ಮನೆ-ಮಠವನ್ನು ಕಳೆದುಕೊಂಡು ಈ ಭಾಗಕ್ಕೆ ಕೃಷ್ಣಾ ಮೇಲ್ಡಂಡೆ ಯೋಜನೆಯನ್ನು ತರಲು ತ್ಯಾಗ ಬಲಿದಾನ ಮಾಡಿದ್ದರು. ಅವರ ತ್ಯಾಗ ಬಲಿದಾನ ವ್ಯರ್ಥವಾಗಬಾರದು, ಬರಗಾಲದ ಜಿಲ್ಲೆಯ ಎನ್ನುವ ಹಣೆಪಟ್ಟಿ ಹೊತ್ತಿಕೊಳ್ಳಬಾರದು ಎಂದು ತಿಳಿಸಿದರು.
59 ತಿಂಗಳು ಒಟ್ಟಾಗಿ ಕೆಲಸ ಮಾಡೋಣ. ಈ ರಾಜ್ಯದ ಅತ್ಯಂತ ಕಟ್ಟಕಡೆಯ, ದೀನ-ದಲಿತರ ರೈತರ ಬದುಕು ಹಸನಾಗಬೇಕು. ಹೆಣ್ಣು ಮಕ್ಕಳ-ಯುವಕರ ಒಳ್ಳೆಯ ಭವಿಷ್ಯ ನಿರ್ಮಾಣವಾಗಬೇಕು. 60 ತಿಂಗಳಲ್ಲಿ 1 ತಿಂಗಳು ರಾಜಕಾರಣವನ್ನು ಮಾಡೋಣ. ಆಗ ಜನ ತೀರ್ಮಾನ ಮಾಡುತ್ತಾರೆ ಯಾರನ್ನು ಅಧಿಕಾರಕ್ಕೆ ತರಬೇಕೆಂದು, 59 ತಿಂಗಳು ಕೇವಲ ರಾಜಕಾರಣ ಮಾಡಿದರೆ, ನಮಗೆ ಅಧಿಕಾರ ನೀಡಿದವರಿಗೆ ನಾವು ದ್ರೋಹ ಮಾಡಿದ ಹಾಗೇ ಆಗುತ್ತದೆ ಎಂದರು.

*ಹೊಸ ಮನ್ವಂತರ*
ಇಂದು ನಾವು ಕರ್ನಾಟಕದಲ್ಲಿ ಹೊಸ ವಾತಾವರಣವನ್ನು, ಮನ್ವಂತರವನ್ನು ಎಲ್ಲಾ ಸೇರಿ ಮಾಡಿದರೆ, ಆಡಳಿತ ಹಾಗೂ ಅಧಿಕಾರಿಗಳು ತನ್ನಿಂದತಾನೇ ಸುಧಾರಣೆಯಾಗುತ್ತದೆ. ಇದು ಬಹಳ ಮುಖ್ಯವಾಗಿದೆ ಎಂದರು. ಇದು ತಂತ್ರಜ್ಞಾನದ ಯುಗ, ಯಾರ ವಿಚಾರ ಏನಿದೆ, ಯಾರ ಸಂಕಲ್ಪ ಎನಿದೆ ಎನ್ನುವ ವಿಚಾರ ಜನರಿಗೆ ತಿಳಿದಿದೆ. ಜನರಿಗೆ ಹುಸಿ ಭರವಸೆ ನೀಡುವ ಅವಶ್ಯಕತೆ ಇಲ್ಲ. ನಾವು ಜನರೊಂದಿಗೆ ಪ್ರಾಮಾಣಿಕವಾಗಿದ್ದರೆ, ಜನರ ಸಂಕಷ್ಟಗಳನ್ನು ಅಂತ್ಯೋದಯ ಮಾಡುವವರಿಗೆ ಜನರು ಅವರಿಗೆ ಬೆಂಬಲವನ್ನು ನೀಡುತ್ತಾರೆ ಎಂದರು.

*ಉತ್ತರ ಕರ್ನಾಟಕ ಅಭಿವೃದ್ಧಿ*
ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಬಹಳಷ್ಟು ಚರ್ಚೆಗಳಾಗಿದೆ, ಕಾನೂನು ಹೋರಾಟಗಳು ನಡೆದಿದೆ, ವರದಿಗಳು ಬಂದಿದೆ, ಸಾವಿರಾರು ಕೋಟಿ ಮಂಜೂರು ಆಗಿದೆ, ಖರ್ಚುಗಳು ಆಗಿದೆ, ಆದರೆ ಇಲ್ಲಿನ ಗ್ರಾಮದಲ್ಲಿನ ಮನೆಗಳ, ಮಕ್ಕಳ, ಮನಸ್ಥಿತಿ, ವಿದ್ಯಾಭ್ಯಾಸ, ಯುವಕರಿಗೆ ಉದ್ಯೋಗ, ಹೆಣ್ಣು ಮಕ್ಕಳಿಗೆ ನೀಡುವ ಗೌರವ ಇದೆಲ್ಲವನ್ನು ನೋಡಿದಾಗ ಮನಸಿಗೆ ಘಾಸಿಯಾಗುತ್ತದೆ. ಇದನ್ನು ಸುಧಾರಣೆ ಮಾಡುವ ಕೆಲಸ ಪ್ರಾರಂಭವಾಗಬೇಕು. ಈ ಬಗ್ಗೆ ನಾನು ತೀರ್ಮಾನ ಮಾಡಿದ್ದೇನೆ, ಈ ಕೆಲಸ ನನ್ನಿಂದಲೇ ಪ್ರಾರಂಭವಾಗಬೇಕೇನ್ನುವ ತೀರ್ಮಾನ ಮಾಡಿದ್ದೇನೆ. ಒಂದು ರೈಲು ಹಳಿಗೆ ಬಂದು ವೇಗವನ್ನು ಕಂಡುಕೊಂಡರೆ, ತನ್ನಿಂದತಾನೇ ನಮ್ಮ ಕನಸುಗಳು ನನಸಾಗುವುದಕ್ಕೆ ಸಾಧ್ಯವಾಗುತ್ತದೆ.

*ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚುರುಕು*

ವಿಜಯಪುರ ಜಿಲ್ಲೆಯ ಆಶೋತ್ತರಗಳಿಗೆ ಅಭಿವೃದ್ಧಿಯ ಕೆಲಸಗಳನ್ನು ಸಮಯ ನಿಗದಿತ ಮಾಡಿಕೊಂಡು ನಿಗದಿತ ಸಮಯದೊಳಗೆ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳುವಂತಾಗಬೇಕು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸುವ ತೀರ್ಮಾನಗಳು ಸಹ ಆಗಬೇಕಿದೆ ಎಂದರು.

ಈ ಭಾಗದಲ್ಲಿ ಯುಕೆಪಿ ಹಂತ-3, ಮುಳವಾಡ ಗುತ್ತಿ ಬಸವಣ್ಣ, ಚಿಮ್ಮಲಗಿ ನೀರಾವರಿ ಈ 3 ಪ್ರಮುಖ ಯೋಜನೆಗಳು ಆಗಬೇಕಾಗಿದೆ. ಇವುಗಳನ್ನು ಪೂರ್ಣ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. 2010ರ ಟ್ರಿಬ್ಯೂನಲ್ ಆದೇಶ ಬಂದಿದ್ದು, ಇದಕ್ಕೂ ಒಂದು ವರ್ಷದ ಮೊದಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆ ಮಾಡಿ ಹಾಗೂ ಕೆಲಸವನ್ನು ಸಹ ಪ್ರಾರಂಭ ಮಾಡಿದ್ದೇವೆ. ಅದೇ ರೀತಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರ ಕಾಲದಲ್ಲಿಯೂ ಕಾಲುವೆಗಳ ನಿರ್ಮಾಣಗಳು ಆಗಿದೆ.
ಯುಕೆಪಿ ಹಂತ-3ಕ್ಕೆ ನಮ್ಮ ನೀರಿನ ಪಾಲನ್ನು ಕಾನೂನಾತ್ಮಕವಾಗಿ ಗೆಜೆಟ್ ಮುಖಾಂತರ ಪಡೆದುಕೊಂಡು, ಈಗಿರುವ ಕಾಲುವೆಗಳು ಮತ್ತು ಮುಂದೆ ಆಗಬೇಕಾಗಿರುವ ಕಾಲುವೆಗಳನ್ನು ಸಂಪೂರ್ಣಗೊಳಿಸಿ, ನೀರು ಹರಿಸುವ ಕೆಲಸ ಮಾಡಿದರೆ, ವಿಜಯಪುರ ಜಿಲ್ಲೆಯ ಬಹುತೇಕ 5 ಲಕ್ಷ ಪ್ರದೇಶ ನೀರಾವರಿ ಪ್ರದೇಶವಾಗಿ ಪರಿವರ್ತನೆ ಆಗುತ್ತದೆ. ಇದಕ್ಕೆ ಮುಖ್ಯವಾಗಿ ಆಲಮಟ್ಟಿ ಜಲಾಶಯವನ್ನು ಎತ್ತರವನ್ನು ಏರಿಸಬೇಕು. ಇದಕ್ಕೆ ಭೂ-ಸ್ವಾಧೀನ ಪ್ರಕ್ರಿಯೆ ನಡೆಯುತ್ತಾ ಇದ್ದು, ಒಂದು ಹಂತ ತಲುಪಿರುತ್ತದೆ.
ನಾನು ಮುಖ್ಯಮಂತ್ರಿಯಾಗಿ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರ್ ಆಂಡ್ ಆರ್ ಸೆಂಟರ್‍ಗಳನ್ನು ಪೂರ್ಣಗೊಳಿಸಲು ಹಾಗೂ ಭೂ-ಸ್ವಾಧೀನ ಪ್ರಕ್ರಿಯೆಗೆ ಸುಮಾರು ರೂ. 2,500 ಕೋಟಿ ಅನುದಾನ ಮಂಜೂರು ಮಾಡಿದ್ದೇನೆ ಮತ್ತು ಭೂ-ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ನಿಮ್ಮ ಬೇಡಿಕೆಗೆ ತಕ್ಕಂತೆ ಅನುದಾನ ನೀಡಲು ಸಾಲವನ್ನಾದರೂ ಮಾಡಿ ಅಥವಾ ಬೇರೆ ಯೋಜನೆಯ ಅನುದಾನವನ್ನು ಕಡಿತಗೊಳಿಸಿಯಾದರೂ ನೀಡುತ್ತೇನೆ. ಇದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.

*ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್*

ವಿಜಯಪುರ ಹಾಗೂ ಬಾಗಲಕೋಟೆ ಭಾಗದಲ್ಲಿ ದೊಡ್ಡಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ಬೆಳೆಗಾರರಿದ್ದು, ಅವರಿಗೆ ಅನುಕೂಲವಾಗುವಂತೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ವೈನ್ ಬೋರ್ಡ್‍ನ್ನು ಮರುನಾಮಕರಣ ಮಾಡಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಡಿ, ಬಹು ವರ್ಷಗಳ ಬೇಡಿಕೆಯ ಇಡೇರಿಸಿದ್ದೇವೆ. ಇದರಲ್ಲಿ ದ್ರಾಕ್ಷಿ ಬೆಳೆಗಾರರು ಸದಸ್ಯರಾಗಲು, ಸಂಸ್ಕರಣೆಯಲ್ಲಿ ಪಾಲ್ಗೊಳ್ಳಲು, ದ್ರಾಕ್ಷಿ ಬೆಳೆಗೆ ಅಧಿಕ ಬೆಲೆ ಪಡೆದು, ಒಳ್ಳೆಯ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಕಲ್ಪಿಸುವ ಮಹತ್ವ ನಿರ್ಧಾರವನ್ನು ಮಾಡಿದ್ದೇವೆ ಎಂದರು.
ಅದರಂತೆ ಜಿಲ್ಲೆಯ ಜಿಲ್ಲಾಡಳಿತ ಸಂಕೀರ್ಣ, 6 ಸಾವಿರ ಜನರಿಗೆ ಹಕ್ಕು ಪತ್ರ ವಿತರಣೆ, ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯವನ್ನು 200 ರಿಂದ 500ಕ್ಕೆ ಹೆಚ್ಚಿಸಲು, ರಸ್ತೆ ಅಭಿವೃದ್ಧಿ, ಹಾಸ್ಟೆಲ್ ನಿರ್ಮಾಣ, ವಾಣಿಜ್ಯ ಕಟ್ಟಡ, ಒಳಾಂಗಣ ಕ್ರೀಡಾಂಗಣ, ಮಹಿಳಾ ಕ್ರೀಡಾ ವಸತಿ ನಿಲಯ ಹೀಗೆ ಎಲ್ಲಾ ರಂಗದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ 2 ವರ್ಷಗಳ ಪ್ರಯತ್ನಕ್ಕೆ ಇಂದು ಚಾಲನೆ ದೊರೆತಿದೆ. ಅದರಂತೆ, ಈ ಎಲ್ಲಾ ಯೋಜನೆಗಳು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಬೇಕಾಗಿದೆ, ನಿರಂತರವಾಗಿ ಕಾಮಗಾರಿಗಳು ತಡಮಾಡಿದರೆ, ಅದರ ನಿರ್ಮಾಣದ ವೆಚ್ಚವು ಹೆಚ್ಚಾಗುತ್ತದೆ ಆ ರೀತಿ ಆಗದಂತೆ ಅಧಿಕಾರಿಗಳಿ ಸೂಚನೆ ನೀಡಿದರು.

*ವಿಮಾನ ನಿಲ್ದಾಣ*

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳ ಹೆಚ್ಚಿನ ಕಾಳಜಿಯಂತೆ ವಿಮಾನ ನಿಲ್ದಾಣದ ವಿಸ್ತರಣೆಗೂ ಕಾರ್ಗೋ ಸೌಲಭ್ಯ, ಏರ್ ಬಸ್ ವ್ಯವಸ್ಥೆ ಮಾಡುವ ಬಗ್ಗೆ ಬೇಡಿಕೆಯೊಂದಿಗೆ ಹೆಚ್ಚುವರಿ ಅನುದಾನವನ್ನು ಬೇಡಿಕೆಗೆ ಶೀಘ್ರವಾಗಿ ಸುಮಾರು 120 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ನೀಡಿ, ಬದ್ಧತೆಯಿಂದ ಕಾಮಗಾರಿಯನ್ನು ಪೂರ್ಣ ಮಾಡುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿ, 24/7 ಅವಧಿ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಈ ಕಾಮಗಾರಿಯನ್ನು ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು ಹಾಗೂ ಕಾಮಗಾರಿ ಪೂರ್ಣಗೊಂಡ ನಂತರ ನಾನೇ ಖುದ್ದು ಬಂದು ಮನೆಮನೆ ತೆರಳಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

*ರೈತ ವಿದ್ಯಾನಿಧಿ*

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ, ಅಧಿಕಾರ ಪಡೆದ 2 ಗಂಟೆಯಲ್ಲಿಯೇ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿಯನ್ನು ಜಾರಿಗೆ ತರಲು ತೀರ್ಮಾನಿಸಲಾಯಿತು, ಇತಿಹಾಸದಲ್ಲಿಯೇ ಈ ಯೋಜನೆ ಬೇರೆಯಾವ ರಾಜ್ಯದಲ್ಲಿಯೂ ಇರಲಿಲ್ಲ, ಅಂತಹ ಒಂದು ನಿರ್ಣಯವನ್ನು ಕೈಗೊಂಡಿದ್ದೇನೆ. 2.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದ್ದು, ಪದವಿ ಶಿಕ್ಷಣಕ್ಕೆ ಈಗ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುತ್ತಿದ್ದಂತೆ ಅರ್ಹರಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು. ಇದರಿಂದ 5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹೈಸ್ಕೂಲ್ ಬರುವುದಕ್ಕೆ ಹಾಗೂ ಹೈಸ್ಕೂಲ್ ನಿಂದ ಪಿಯುಸಿ ಮಾಡುವ ಸಂಖ್ಯೆ ಕಡಿಮೆಯಾಗುತ್ತಿದೆಂಬ ಮಾಹಿತಿಯಿಂದ ಇದಕ್ಕೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ರೈತರ ವಿದ್ಯಾನಿಧಿಯನ್ನು 8ನೇ ಮತ್ತು 9ನೇ ತರಗತಿ ಮಕ್ಕಳಿಗೂ ವಿಸ್ತರಣೆ ಮಾಡುಬೇಕೆನ್ನುವ ಬಗ್ಗೆ ತೀರ್ಮಾನ ಮಾಡಿದ್ದೇನೆ ಈ ಬಗ್ಗೆ ಕೂಡಲೇ ಆದೇಶ ಮಾಡುವುದಾಗಿ ಘೋಷಿಸಿದರು.

ಕೇಂದ್ರದ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ 6,800/- ರೂ. ಪರಿಹಾರಕ್ಕೆ ಇದಕ್ಕೆ ರಾಜ್ಯ ಸರ್ಕಾರವು ಇನ್ನೂ 6,800 ರೂ. ಸೇರಿಸಿ, 13,600 ರೂ. ಪರಿಹಾರ ನೀಡುವ ತೀರ್ಮಾನ. ನೀರಾವರಿ ಜಮೀನಿನಲ್ಲಿ ಬೆಳೆಹಾನಿಗೆ ಪ್ರತಿ ಹೆಕ್ಟೇರ್‍ಗೆ 13,500 ರೂ.ಗಳನ್ನು ಹೆಚ್ಚುವರಿಯಾಗಿ 11,500 ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‍ಗೆ 25,000 ರೂ ದೊರೆಯಲಿದೆ. ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್‍ಗೆ 18,000 ರೂ. ಪರಿಹಾರಕ್ಕೆ 10,000 ರೂ. ಸೇರಿಸಿ, ಒಟ್ಟು 28,000 ರೂ. ಪರಿಹಾರ ನೀಡುವ ಒಂದು ಐತಿಹಾಸಿಕ ತೀರ್ಮಾನ ಮಾಡಿದ್ದೇವೆ ಎಂದರು. ಒಟ್ಟು 14 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲವಾಗಲಿದೆ ಅಂತಹ ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತಿದ್ದೇರೆ ಅದು ನಿಮ್ಮ ಸರ್ಕಾರ – ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎಂದು ಹೇಳಿದರು.

ಪ್ರವಾಹದಿಂದ ಮನೆಹಾನಿಯಾದವರಿಗೆ ಕೂಡಲೇ 95,000 ಸಾವಿರ ರೂ ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಹಣ ಬಿಡುಗಡೆಯಾಗಿದೆ. ಅದರ ಜೊತೆಗೆ 5 ಲಕ್ಷ ಮನೆಗಳ ಮಂಜೂರಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಲ್ಲಿ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ 1 ಒಂದು ಲಕ್ಷ ನಗರ ಪ್ರದೇಶದಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಂಡಿದೆ, ಇದರಲ್ಲಿ ವಿಜಯಪುರಕ್ಕೂ ಕೂಡ ನಗರ ಪ್ರದೇಶ ಮನೆಗಳನ್ನು ನೀಡುವಂತೆ ಕೆಲಸವನ್ನು ಮಾಡುತ್ತೇವೆ ಎಂದರು. ಇದರೊಂದಿಗೆ ಸ್ಲಂಗಳಲ್ಲಿ 84 ಸಾವಿರ ಮನೆಗಳನ್ನು ನೀಡುವ ತೀರ್ಮಾನವನ್ನು ಮಾಡಲಾಗಿದ್ದು, ನಾನು ಬಂದ ಮೇಲೆ ಅನುಮತಿಯನ್ನು ನೀಡಿದ್ದು, ಈಗಾಲೇ ಕೆಲಸಗಳು ಪ್ರಾರಂಭವಾಗಿದೆ ಎಂದರು.
ಜನಪರ ನಿಲುವುಗಳನ್ನು, ಪ್ರಾದೇಶಿಕವಾಗಿ ಅಭಿವೃದ್ಧಿ ಮಾಡುವ ಹೆಚ್ಚಿನ ಆದ್ಯತೆ ಕೊಟ್ಟು ನಮ್ಮ ಸರ್ಕಾರ ಕೆಲಸವನ್ನು ಮಾಡುತ್ತಿದೆ. ಮಂಜೂರು ಆಗಿರುವ 5 ಲಕ್ಷಗಳ ಮನೆಗಳು, ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿಯೇ ಪೂರ್ಣಗೊಳಿಸುವಂತೆ ಸಚಿವರಿಗೂ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸುವ ಇದು ನಮ್ಮ ಸರ್ಕಾರದ ನೀತಿಯಾಗಿದೆ.

ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಗಲಿರುಳು ಕೆಲಸವನ್ನು ಮಾಡುತ್ತೇನೆ. ಇದಕ್ಕೆ ವಿಶೇಷವಾದ ಪ್ರಯತ್ನಗಳನ್ನು, ವಿಶೇಷವಾದ ಅನುದಾನವನ್ನು ಹಾಗೂ ವಿಶೇಷವಾದ ಅಧಿಕಾರಿಗಳನ್ನು ನೇಮಿಸಿ, ಮೇಲ್ವಿಚಾರಣೆಯನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದರು.
ವಿಜಯಪುರ ಜಿಲ್ಲೆಯ ಜನರು ನಮಗೆ ಬಹಳ ಸಹಕಾರವನ್ನು ನೀಡಿದ್ದಾರೆ. ಅದರಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಬಿಜಾಪುರ ದುಳಾಪುರ ಅಲ್ಲ ಬಿಜಾಪುರ ಬಂಗಾರದಪುರ ಆಗುತ್ತದೆ ಎಂದರು. ಆ ನಿಟ್ಟಿನಲ್ಲಿ ನಾವು-ನೀವು ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು. ಬರುವಂತೆ ದಿನಗಳಲ್ಲಿ ವಿಜಯಪುರಕ್ಕೆ ಆಡಳಿತದಲ್ಲಿಯೂ, ರಾಜಕಾರಣದಲ್ಲಿಯೂ ಒಳ್ಳೆಯ ಭವಿಷ್ಯವಿದೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

 ವಿದೇಶ ಪ್ರವಾಸ : ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button