ಪ್ರಗತಿವಾಹಿನಿ ಸುದ್ದಿ; ಜೈಪುರ: ಬಜೆಟ್ ಅಧಿವೇಶನದ ವೇಳೆ ಹಾಸ್ಯಾಸ್ಪದ ಘಟನೆಯೊಂದು ರಾಜಸ್ಥಾನದ ವಿಧಾನಸಭೆಯಲ್ಲಿ ನಡೆದಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಳೆ ಬಜೆಟ್ ಓದುವ ಮೂಲಕ ನಗೆಪಾಟಲಿಗೆ ಕಾರಣರಾಗಿದ್ದಾರೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್ ಮಂಡಿಸಬೇಕಿತ್ತು. ಆದರೆ ವಿಧಾನಸಭೆಯಲ್ಲಿ ಕಳೆದ ವರ್ಷದ ಬಜೆಟ್ ಓದಿ ಎಡವಟ್ಟು ಮಾಡಿಕೊಂಡಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಜೆಟ್ ಪ್ರತಿ ಕೈಗೆತ್ತಿಕೊಂಡ ಸಿಎಂ ಗೆಹ್ಲೋಟ್, ಬಜೆಟ್ ಓದಲು ಆರಂಭಿಸಿದ್ದಾರೆ. ಅದು ಕಳೆದ ವರ್ಷದ ಹಳೆ ಬಜೆಟ್ ಎಂಬುದೂ ಸಿಎಂ ಗಮನಕ್ಕೆ ಬಂದಿಲ್ಲ. ಹಳೆ ಬಜೆಟ್ ಓದುತ್ತಿದ್ದಂತೆ ವಿಪಕ್ಷ ಬಿಜೆಪಿ ನಾಯಕರು ಗದ್ದಲ ಆರಂಭಿಸಿದ್ದಾರೆ. ಗದ್ದಲದ ನಡುವೆಯೂ 7 ನಿಮಿಷಗಳ ಕಾಲ ಗೆಹ್ಲೋಟ್ ಬಜೆಟ್ ಓದಿದ್ದಾರೆ. ತಕ್ಷಣ ಎಚ್ಚೆತ್ತ ಸಚಿವ ಮಹೇಶ್ ಜೋಶಿ, ಸಿಎಂ ಬಳಿ ಬಂದು ಬಜೆಟ್ ಮಂಡನೆ ತಡೆದಿದ್ದಾರೆ. ಇದು ಕಳೆದ ವರ್ಷದ ಬಜೆಟ್ ಎಂಬುದನ್ನು ಗಮನಕ್ಕೆ ತಂದಿದ್ದಾರೆ, ತಮ್ಮಿಂದಾದ ಪ್ರಮಾದಕ್ಕೆ ಗೆಹ್ಲೋಟ್ ನಗಲು ಆರಂಭಿಸಿದ್ದಾರೆ. ತಕ್ಷಣ ಬಜೆಟ್ ಭಾಷಣವನ್ನು ಸಿಎಂ ನಿಲ್ಲಿಸಿದ್ದಾರೆ. ಸದನದಲ್ಲಿ ಗದ್ದಲ ಕೋಲಾಹಲ ಆರಂಭಾವಾಗುತ್ತಿದ್ದಂತೆ ಕೆಲ ಕಾಲ ಕಲಾಪವನ್ನು ಮುಂದೂಡಲಾಗಿದೆ.
ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಭಾಷಣ ನೇರ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಬಜೆಟ್ ವೇಳೆ ಹಳೆ ಬಜೆಟ್ ಓದುವ ಮೂಲಕ ಮುಖ್ಯಮಂತ್ರಿ ಗೆಹ್ಲೋಟ್ ನಗೆಪಾಟಲಿಗೆ ಗುರಿಯಾಗಿದ್ದಾರೆ.
*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO, ಕಂಪ್ಯೂಟರ್ ಆಪರೇಟರ್*
https://pragati.taskdun.com/pdocomputer-operatorlokayuktaarrestedchitradurgajanakal/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ