ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಭರತೇಶ ಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ರಾಜೀವ್ ದೊಡ್ಡಣ್ಣನವರ (68) ಗುರುವಾರ, ಮಾರ್ಚ್ 2 ರಂದು ರಾತ್ರಿ 11 :30ಕ್ಕೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಅಳಿಯ, ಮೊಮ್ಮಕ್ಕಳು, ಇಬ್ಬರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಮಾರ್ಚ್ 3, ಶುಕ್ರವಾರ ಬೆಳಿಗ್ಗೆ 8:30 ರಿಂದ 10:30 ಗಂಟೆಯವರೆಗೆ ಭರತೇಶ್ ಶಿಕ್ಷಣ ಟ್ರಸ್ಟ್ ಆವರಣದಲ್ಲಿ, ನಂತರ 12 ಗಂಟೆಯವರೆಗೆ ಹಿಂದವಾಡಿಯ ಅವರ ಮನೆಯಲ್ಲಿ ಇಡಲಾಗುವುದು. ಅಂತ್ಯಕ್ರಿಯೆ ಶುಕ್ರವಾರ ಮಾರ್ಚ್ 3 ರಂದು ಮಧ್ಯಾಹ್ನ 1 ಗಂಟೆಗೆ ಶಹಾಪುರ ರುದ್ರ ಭೂಮಿಯಲ್ಲಿ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೋಮಲಣ್ಣ ದೊಡ್ಡಣ್ಣವರ ಅವರ ಪುತ್ರರಾಗಿರುವ ರಾಜೀವ್ ಅವರು ಸಮಾಜದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳ ಛಾಪು ಮೂಡಿಸಿದ್ದರು. ಅವರು ಭಾರತೀಯ ಜೈನ್ ಅಸೋಸಿಯೇಷನ್‌ನ ರಾಷ್ಟ್ರೀಯ ಉಪಾಧ್ಯಕ್ಷರು, ಜೈನ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಮತ್ತು ಕಮಲ ಬಸದಿ ಪೂಜಾ ಸಮಿತಿಯ ಅಧ್ಯಕ್ಷರಾಗಿದ್ದರು.
ಕಳೆದ ಹಲವು ವರ್ಷಗಳಿಂದ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತ ಬರಲಾಗಿದೆ. 2005ರಲ್ಲಿ ಬೆಳಗಾವಿಯಲ್ಲಿ ತರುಣಸಾಗರ ಮಹಾರಾಜರ ಚಾತುರ್ಮಾಸವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಖಾನಾಪುರ ತಾಲೂಕಿನ ಕಸಮಳಗಿಯಲ್ಲಿ ಪತ್ತೆಯಾದ 11ನೇ ಶತಮಾನದ ಪಾರ್ಶ್ವನಾಥನ ವಿಗ್ರಹಕ್ಕೆ ಭವ್ಯವಾದ ದೇಗುಲವನ್ನು ನಿರ್ಮಿಸಲು ಅವರು ಮುಂದಾಗಿದ್ದರು.
ಭರತೇಶದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಹೊಸ ಮತ್ತು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರು. ಅವರು ರಾಜಕೀಯ, ತಂತ್ರಜ್ಞಾನ, ಕ್ರೀಡೆ, ಸಾಹಿತ್ಯ, ಧರ್ಮ ಮತ್ತು ಶಿಕ್ಷಣದಲ್ಲಿ ತೀವ್ರವಾದ ಅಧ್ಯಯನವನ್ನು ಹೊಂದಿದ್ದರು. ಎಸ್. ಐ. ಟಿ. ತುಮಕೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ಕ್ರಿಕೆಟ್‌ನಲ್ಲಿ ವಿಶ್ವವಿದ್ಯಾನಿಲಯವನ್ನು ಮುನ್ನಡೆಸಿದ್ದರು.
ನಾಂದನಿ ಮಠದ ಪೂಜ್ಯ ಜಿನ್ ಸೇನ್ ಭಟ್ಟಾರಕ ಸ್ವಾಮಿಗಳು ಹಾಗೂ ಶ್ರವಣಬೆಳಗೊಳದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಸಮಾಜ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ