*ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಡಿಯ ಕಾಲೇಜಿಗೆ ಕೆಂಗಲ್ ಹನುಮಂತಯ್ಯ ಅವರ ಹೆಸರು*: *ಸಿಎಂ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ರಾಮನಗರ : ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ರಾಮನಗರ ಮೆಡಿಕಲ್ ಕಾಲೇಜಿಗೆ ಮಾಜಿ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. (ಮೊದಲು ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ಪ್ರಕಟಣೆಯಲ್ಲಿ ರಾಜೀವ ಗಾಂಧಿ ವಿವಿ ಹೆಸರು ಬದಲಾಯಿಸಿ ಕೆಂಗಲ್ ಹನುಮಂತಯ್ಯ ಹೆಸರಿಡಲಾಗುವುದು ಎಂದಿತ್ತು. ನಂತರ ಅದನ್ನು ಬದಲಾವಣೆ ಮಾಡಿ, ರಾಮನಗರ ಮೆಡಿಕಲ್ ಕಾಲೇಜಿಗೆ ಕೆಂಗಲ್ ಹನುಮಂತಯ್ಯ ಹೆಸರಿಡಲಾಗುವುದು ಎಂದು ಮತ್ತೊಂದು ಪ್ರಕಟಣೆ ನೀಡಲಾಯಿತು)
ಈ ಭಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹನುಮಂತಯ್ಯ ಅವರ ಹೆಸರನ್ನು ಇಡಲಾಗುವುದು ಎಂದರು. ಈ ಕುರಿತು ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲಾಗುವುದು ಎಂದರು. ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಇಲ್ಲಿ ಒಂದು ಸಾವಿರ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಬರಲಿದೆ. ರಾಮನಗರದ ಬಡವರ ಚಿಕಿತ್ಸೆಗೆ ದೊಡ್ಡ ಸಂಸ್ಥೆಯಾಗಲಿದೆ. ಸಂಶೋಧನೆಗಳು ದೊಡ್ಡ ಪ್ರಮಾಣದಲ್ಲಿ ಆಗಲಿದೆ. ಭಾರತದ ದೇಶದಲ್ಲಿಯೇ ದೊಡ್ಡ ಆರೋಗ್ಯ ಕೇಂದ್ರವಾಗಲಿದೆ ಎಂದರು.
*ಸಮಸ್ಯೆಗೆ ಪರಿಹಾರ*
ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆಗಬೇಕೆಂದು ಕಳೆದ 16 ವರ್ಷಗಳಿಂದ ಪ್ರಯತ್ನ ನಡೆದಿದೆ. ಹಲವಾರು ತಿರುವುಗಳನ್ನು ಕಂಡು ಸ್ವಂತ ಕಟ್ಟಡ ಬಗ್ಗೆ ಸಂಶಯ ಉಂಟಾಗುವ ಮಟ್ಟಕ್ಕೆ ತಲುಪಿ, ಗೊಂದಲದ ಗೂಡಾಗಿತ್ತು. ಇಲ್ಲಿ ವಿಶ್ವವಿದ್ಯಾಲಯ ಕಟ್ಟಲೇಬೇಕೆಂದು ಸರ್ಕಾರ ಸಮಸ್ಯೆಗೆ ಪರಿಹಾರವನ್ನು ಒದಗಿಸಿದೆ. ಕನ್ನಡ ನಾಡು ಸಮಗ್ರವಾಗಿ ಅಭಿವೃದ್ಧಿಯಾಗಲು ಪ್ರಾದೇಶಿಕವಾಗಿಯೂ ಅಭಿವೃದ್ಧಿ ಯಾಗಬೇಕು ಎಂದರು.
*ಬಿಡದಿ, ಮಾಗಡಿಯನ್ನು ಬೆಂಗಳೂರಿಗೆ ಮೆಟ್ರೋ ಮೂಲಕ ಜೋಡಿಸಬೇಕು*
ಇಂಟಿಗ್ರೇಟೆಡ್ ಟೌನ್ ಶಿಪ್ ಕೆಲಸ ಈ ವರ್ಷ ಪ್ರಾರಂಭವಾಗಲಿದೆ. ಬಿಡದಿ ಹಾಗೂ ಮಾಗಡಿಯವರೆಗೆ ಮೆಟ್ರೋ ವಿಸ್ತರಿಸಿ ರಾಮನಗರವನ್ನು ಬೆಂಗಳೂರಿಗೆ ಜೋಡಿಸಬೇಕು ಎಂದರು.
*ಆರ್ಥಿಕ ಅಭಿವೃದ್ಧಿಯ ಸಂಕೇತ*
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ರಸ್ತೆ ಆರ್ಥಿಕ ಅಭಿವೃದ್ಧಿಯ ಸಂಕೇತ. ಇದೊಂದು ರಾಷ್ಟ್ರೀಯ ಆಸ್ತಿಯಾಗಿದ್ದು, ಎಲ್ಲದರಲ್ಲಿಯೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದಾಗಿದೆ ಎಂದರು.
*ಸರ್ವರಿಗೂ ವಿಕಾಸ, ಸಮಪಾಲು*
ರಾಮನಗರ ಹೊಸ ಜಿಲ್ಲೆಯಾಗಿದ್ದು ಇಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಆದರೆ ಸಾರ್ಥಕವಾಗುತ್ತದೆ. ಎಲ್ಲಾ ತಾಲ್ಲೂಕು ಗಳು ಅಭಿವೃದ್ಧಿಯಾಗುತ್ತವೆ. ನೀರಾವರಿ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
*ಬೃಹತ್ ರೇಷ್ಮೆ ಮಾರುಕಟ್ಟೆಗೆ ಅಡಿಗಲ್ಲು*
ರಾಮನಗರಕ್ಕೆ 180 ಕೋಟಿ ರೂ.ಗಳ ವೆಚ್ಚದ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಅಡಿಗಲ್ಲು ಹಾಕಲಾಗಿದೆ. ಇಷ್ಟು ಬೃಹತ್ ರೇಷ್ಮೆ ಮಾರುಕಟ್ಟೆ ರಾಜ್ಯದಲ್ಲಿ ಎಲ್ಲೂ ಇಲ್ಲ. ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ನಿಯಂತ್ರಣ ರೈತರ ಕೈಗೆ ಬರಲಿದೆ.ಮಾವಿನ ಸಂಸ್ಕರಾಣಾ ಘಟಕಗಳಿಗೆ ಚಾಲನೆ ನೀಡಲಾಗಿದ್ದು, 160 ಕೋಟಿ ಮೊತ್ತದ ಹೊಸ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ ಎಂದರು.
*ಸರ್ವರಿಗೂ ವಿಕಾಸ*
605 ಕೋಟಿ ರೂ.ಗಳ ಯೋಜನೆಗೆ ಸರ್ಕಾರ ಅನುದಾನ ನೀಡಿ ಪ್ರಾರಂಭಿಸಿದೆ.ಈ ಭಾಗದ ಜನಫ ಹಿತದೃಷ್ಟಿಯಿಂದ ಈ ಕೆಲಸವನ್ನು ಮಾಡಲಾಗಿದೆ. ನ್ಯಾಯಸಮ್ಮತವಾಗಿ ಸರ್ವರಿಗೂ ವಿಕಾಸ, ಸಮಪಾಲು ಕೊಡುವ ಸರ್ಕಾರ ನಮ್ಮದು ಎಂದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ , ಐಟಿ ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವರಾದ ಕೆ.ಸಿ.ನಾರಾಯಣಗೌಡ, ಡಾ: ಕೆ.ಸುಧಾಕರ್, ಶಾಸಕರಾದ ವೈ.ಎ. ನಾರಾಯಣಸ್ವಾಮಿ, ಸಿ.ಪಿ. ಯೋಗೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ