ಡಾ. ಡಿ. ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ನಾಮನಿರ್ದೇಶನ; ಇಂತಹ ಆಯ್ಕೆ ಗುಣಾತ್ಮಕ ಬದಲಾವಣೆಯ ಹೊಸ ಕಲ್ಪನೆ : ಸಿಎಂ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದ್ದು, ಇಂತಹ ಆಯ್ಕೆ ಗುಣಾತ್ಮಕವಾದ ಬದಲಾವಣೆಯ ಹೊಸ ಕಲ್ಪನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕ ಗೌರವ ಹಾಗೂ ಹೆಮ್ಮೆಪಡುವಂತಹ ವಿಷಯವಾಗಿದೆ. ಪ್ರತಿಫಲಾಪೇಕ್ಷೆಯಿಲ್ಲದೇ ಜನಕಲ್ಯಾಣಕ್ಕಾಗಿ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಜನರ ಸಮಸ್ಯೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಕೆರೆಗಳ ನಿರ್ಮಾಣ, ಕೃಷಿ ಯಂತ್ರೋಪಕರಣ ಪೂರೈಕೆ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು, ಮದ್ಯವ್ಯಸನ ವಿರೋಧಿ ಅಭಿಯಾನ, ಹೀಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸಗಳನ್ನು ಮಾಡಿರುವ ಅವರು ಕೇವಲ ಮಾತಿನಲಲ್ಲ, ಕೃತಿಯಲ್ಲಿಯೂ ಅವರ ಸೇವೆ ಅಮೋಘವಾದದ್ದು. ಒಬ್ಬ ವ್ಯಕ್ತಿ ಸರ್ಕಾರಕ್ಕೆ ಸರಿಸಮಾನವಾಗಿ ಜನಪರ ಕೆಲಸ ಮಾಡುತ್ತಿರುವುದು ಒಂದು ದಾಖಲೆ. ಇವರ ಕೆಲಸಗಳು ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಶ್ರೇಷ್ಠ ವ್ಯಕ್ತಿತ್ವದ ಹಿರಿಯರಿಗೆ ರಾಜ್ಯಸಭಾ ಸದಸ್ಯರ ಸ್ಥಾನ ದೊರೆತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಇದರಿಂದ ರಾಜ್ಯಸಭೆಗೆ ದೊಡ್ಡ ಗೌರವ ಸಿಗಲಿದೆ. ಕರ್ನಾಟಕದ ಶ್ರೇಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದರು.
ಶ್ರೇಷ್ಠ ಸಾಧಕರನ್ನು ಗುರುತಿಸಲಾಗುತ್ತಿದೆ :
ಉಳಿದ ನಾಮನಿರ್ದೇಶಿತರಾದ ಪಿ.ಟಿ.ಉಷಾ, ಇಳಯರಾಜ, ವಿಜಯೇಂದ್ರ ಪ್ರಸಾದ್ ಅವರು ತಮ್ಮ ಕ್ಷೇತ್ರಗಳಲ್ಲಿ ಸಾಧಕರಾಗಿದ್ದಾರೆ. ಸಾಧಕರನ್ನು ಗುರುತಿಸುವ ಕೆಲಸವನ್ನು ನಾಯಕ ಮೋದಿಯವರು ಮಾಡುತ್ತಿದ್ದಾರೆ. ಪದ್ಮ ಪ್ರಶಸ್ತಿಗಳೂ ಸಹ ಎಲೆಮರೆಯ ಕಾಯಿಯಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಸಾಧಕರನ್ನು ಗುರುತಿಸಲಾಗುತ್ತದೆ. ಇತ್ತೀಚೆಗಷ್ಟೇ ನಡೆದ ರಾಷ್ಟ್ರಪತಿಗಳ ಆಯ್ಕೆಯಲ್ಲಿಯೂ ಕೂಡ ಆಡಳಿತದಲ್ಲಿ ಅನುಭವವಿರುವ ಪರಿಶಿಷ್ಟ ಪಂಗಡದ ಸೇರಿದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ ಗುಣಾತ್ಮಕ ಆಯ್ಕೆಯ ಪ್ರತೀಕವಾಗಿದೆ ಎಂದು ತಿಳಿಸಿದರು.
ಹೆಗ್ಗಡೆಯವರ ಅನುಭವದಿಂದ ಇಡೀ ದೇಶಕ್ಕೆ ಲಾಭ :
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಕನ್ನಡ ನಾಡಿನ ಸಮಗ್ರ ಜನತೆಗೆ ಬಹಳ ಸಂತಸವುಂಟಾಗಿದ್ದು, ಅವರ ಅಗಾಧವಾದ ಅನುಭವ ಇಡೀ ದೇಶಕ್ಕೆ ಲಾಭವನ್ನು ತಂದುಕೊಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ನಾಲ್ಕೈದು ದಶಕಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮಾತ್ರವಲ್ಲ, ರಾಜ್ಯದಾದ್ಯಂತ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಕೆರೆಗಳ ನಿರ್ಮಾಣ, ಕೃಷಿ ಯಂತ್ರೋಪಕರಣ ಪೂರೈಕೆ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು, ವಿಜ್ಞಾನ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ತಮ್ಮ ಜ್ಞಾನದಿಂದ ರಾಜ್ಯಸಭೆಯಲ್ಲಿನ ಚರ್ಚೆಗಳನ್ನು ಮತ್ತೊಂದು ಎತ್ತರಕ್ಕೆ ಒಯ್ಯಲಿದ್ದಾರೆ ಎಂದು ತಿಳಿಸಿದರು.
ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ :
ಕೆರೂರಿನ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಆರೋಪಿಗಳ ಬಂಧನವನ್ನು ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸೇರಿಸಿದ್ದಾರೆ. ಎರಡೂ ಪಂಗಡಗಳ ನಡುವೆ ಶಾಂತಿಯನ್ನು ಕಾಪಾಡುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರದೇಶದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು
ಎಲೆಕ್ಟ್ರಾನಿಕ್ಸ್ ಆರ್ ಅಂಡ್ ಡಿ ಕೇತ್ರದಲ್ಲಿರುವ ಉದ್ಯಮಿಗಳಿಗೆ ಮುಖ್ಯಮಂತ್ರಿಗಳ ಕರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ