Kannada NewsLatest

ಸರಕಾರ ಕೈ ಹಿಡಿಯದಿದ್ದರೂ ಕುಂದದ ಕುಂದಾ ನಗರಿಯ ರಾಜ್ಯೋತ್ಸವ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ

ರಾಜ್ಯೋತ್ಸವ ಆಚರಣೆಗೆ ಕೊನೆಗೂ ರಾಜ್ಯ ಸರಕಾರ ವಿಶೇಷ ಅನುದಾನ ನೀಡದೆ ಬೆಳಗಾವಿಯ ಗಡಿ ಕನ್ನಡಿಗರ ಆತ್ಮಾಭಿಮಾನಕ್ಕೆ ಪೆಟ್ಟು ನೀಡಿದೆ. ಆದರೆ ಬೆಳಗಾವಿಗರು ಸ್ವಯಂ ಪ್ರೇರಿತರಾಗಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಿಗರು ಮೊದಲಿಂದಲೂ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ನಡೆಸುತ್ತ ಬಂದಿದ್ದು, ಕನ್ನಡಿಗರ ಅಸ್ಮಿತೆಯನ್ನು ಸಾರುತ್ತಿದ್ದಾರೆ. ಮರಾಠಿ ಸಂಘಟನೆಗಳ ಕಿರಿಕಿರಿಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರಾಜ್ಯೋತ್ಸವವನ್ನು ಮತ್ತಷ್ಟು ವೈಭವೋಪೇತವಾಗಿ ಹಮ್ಮಿಕೊಳ್ಳುವುದು ಸರಕಾರದ ಹೊಣೆಗಾರಿಕೆಯೂ ಹೌದು.

ಮೈಸೂರು ದಸರಾಕ್ಕೆ ಸಿಗುವ ಪ್ರಾಧಾನ್ಯತೆ ಬೆಳಗಾವಿಯ ರಾಜ್ಯೋತ್ಸವ, ಗಣೇಶ ಚತುರ್ಥಿಗೂ ಸಿಗಬೇಕು ಎಂಬ ಒತ್ತಾಯ ಬೆಳಗಾವಿಯ ಕನ್ನಡಿಗರದ್ದು. ಆದರೆ ಈ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ.

ಈ ಬಾರಿ ರಾಜ್ಯೋತ್ಸವ ಆಚರಣೆಗೆ ವಿವಿಧ ಕನ್ನಡ ಸಂಘಟನೆಗಳು ೧ ಕೋಟಿ ಅನುದಾನದ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದವು. ಬೆಳಗಾವಿ ಜಿಲ್ಲಾಡಳಿತವೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಯಥಾ ಪ್ರಕಾರ ಸರಕಾರ ಅನುದಾನ ನೀಡದೆ ತಣ್ಣಗೆ ಕುಳಿತಿದೆ.

ಮರಾಠಿ ಸಂಘಟನೆಗಳು ಬೆಳಗಾವಿಯಲ್ಲಿ ಹಮ್ಮಿಕೊಳ್ಳುವ ಬಹುತೇಕ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರಕಾರ ಅನುದಾನ ನೀಡುತ್ತ ಬಂದಿದೆ. ಅಲ್ಲಿನ ಬಹಳಷ್ಟು ಮುಖಂಡರು ಬೆಳಗಾವಿಗೆ ಬಂದು ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಯಾವತ್ತೂ ಬೆಳಗಾವಿ ಮಹಾರಾಷ್ಟ್ರದ ಭಾಗವಾಗವಾಗಲು ಸಾಧ್ಯವಿಲ್ಲ ಎಂಬ ಕಹಿ ಸತ್ಯ ತಿಳಿದಿದ್ದರೂ ವ್ಯಾಮೋಹವನ್ನು ಅವರು ಕಳೆದುಕೊಂಡಿಲ್ಲ.

ಆದರೆ ನಮ್ಮದೇ ಸರಕಾರ, ನಮ್ಮದೇ ರಾಜ್ಯದ ಗಡಿ ಭಾಗದ ಉತ್ಸವಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ಬೆಳಗಾವಿಯ ಕನ್ನಡಿಗರಿಗೆ ಬಿಸಿ ತುಪ್ಪದಂತಾಗಿದೆ.

ವಾಹನ ಡೀಸೆಲ್ ಮಾತ್ರ ಸರಕಾರದ ಕೊಡುಗೆ

ಈ ಬಾರಿ ಸರಕಾರಿ ಇಲಾಖೆಗಳನ್ನು ಹೊರತುಪಡಿಸಿಯೂ ವಿವಿಧ ಕನ್ನಡ ಸಂಘಟನೆಗಳಿಂದ ೭೦ಕ್ಕೂ ಹೆಚ್ಚು ರೂಪಕಗಳ ಮೆರವಣಿಗೆ ಕನ್ನಡ ರಾಜ್ಯೋತ್ಸವದಲ್ಲಿ ನಡೆಯಿತು. ಜನ ರಾಜ್ಯೋತ್ಸವವನ್ನು ಹಬ್ಬಕ್ಕಿಂತ ಹೆಚ್ಚಿನ ಸಂಭ್ರಮದಲ್ಲಿ ಆಚರಿಸಿದರು. ಮಠಗಳು ಮುಂದೆ ಬಂದು ಸಿಹಿಯೂಟ ನೀಡಿ ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿದವು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ 80 ಸಾವಿರಕ್ಕೂ ಹೆಚ್ಚು ಜನರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದರು.

ಆದರೆ ರಾಜ್ಯ ಸರಕಾರ ಮಾತ್ರ ರೂಪಕಗಳ ಮೆರವಣಿಗೆಗೆ ಕನ್ನಡ ಸಂಘಟನೆಗಳಿಗೆ ಒಂದು ವಾಹನ ಮತ್ತು ಡೀಸೆಲ್ ವ್ಯವಸ್ಥೆ ಮಾತ್ರ ಮಾಡಿ ಕೈ ತೊಳೆದುಕೊಂಡಿದೆ. ಉಳಿದಂತೆ, ರೂಪಕಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಡೀಸೆಲ್, ವಾಹನ ಹೊರತಾಗಿ ಉಳಿದ ಖರ್ಚುಗಳನ್ನು ಸಂಘಟನೆಗಳೇ ಭರಿಸಿವೆ.

ಮೊದಲೇ ಮಹಾರಾಷ್ಟ್ರದ ಗಡಿ ಕ್ಯಾತೆಯಿಂದ ಬಳಲುತ್ತಿರುವ ಬೆಳಗಾವಿಯ ಕನ್ನಡಿಗರಿಗೆ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಲು ರಾಜ್ಯ ಸರಕಾರ ಇನ್ನು ಮುಂದಾದರೂ ಕಣ್ತೆರೆಯಲಿ, ಬೆಂಗಳೂರು, ಮೈಸೂರು ಭಾಗದಲ್ಲಿ ಉತ್ಸವಗಳಿಗೆ ನೀಡುವ ಪ್ರಾಧಾನ್ಯತೆಯನ್ನು ಉತ್ತರ ಕರ್ನಾಟಕದ ಉತ್ಸವಗಳಿಗೂ ನೀಡುವಂತಾಗಲಿ ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ಕನ್ನಡಕ್ಕಾಗಿ ಹುಚ್ಚಾಯ್ತು ಬೆಳಗಾವಿ: ದೃಷ್ಟಿ ಹರಿಸಿದಲ್ಲೆಲ್ಲ ಹಳದಿ-ಕೆಂಪು; ಕನ್ನಡಿಗರ ಸಂಭ್ರಮ ನೋಡಲು ಕಣ್ಣೆರಡು ಸಾಲದಾಯ್ತು

https://pragati.taskdun.com/latest/belagavi-went-crazy-for-kannada-yellow-red-everywhere-you-look-it-brought-tears-to-see-the-joy-of-the-kannadigas/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button