ಪ್ರಗತಿವಾಹಿನಿ ಸುದ್ದಿ, ಖಾನಾಪುರ:
೧೮ನೇ ಶತಮಾನದಲ್ಲೇ ದೇಶದ ನಾಗರಿಕರಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹೊತ್ತಿಸಿ ದೇಶಾಭಿಮಾನ ಮೆರೆದ ಶೂರ ಸಂಗೊಳ್ಳಿ ರಾಯಣ್ಣನ ಕರ್ಮಭೂಮಿಯಾಗಿರುವ ತಾಲೂಕಿನ ನಂದಗಡ ಗ್ರಾಮದಲ್ಲಿ ಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ೯೬.೩೫ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದ ಜನಪ್ರತಿನಿಧಿಗಳು ಚಾಲನೆ ನೀಡಿದರು.
ನಂದಗಡ ಗ್ರಾಮದ ಎನ್.ಆರ್.ಸಿ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ೭೫.೬೯ ಕೋಟಿ ವೆಚ್ಚದಲ್ಲಿ ವೀರಭೂಮಿ ನಿರ್ಮಾಣ, ರಾಯಣ್ಣನ ಸಮಾಧಿ ಸ್ಥಳದ ಬಳಿ ೧೮ ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ, ೩.೦೬ ಕೋಟಿ ವೆಚ್ಚದಲ್ಲಿ ಸಮಾಧಿ ಸ್ಥಳದ ಬಳಿಯ ಐತಿಹಾಸಿಕ ಕೆರೆ ಜೀರ್ಣೋದ್ಧಾರ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಮತ್ತು ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಹ ಅಧ್ಯಕ್ಷ ಸಿ.ಪುಟ್ಟರಂಗ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ , ರ್ಯವನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಜೊತೆಗೆ ಸಂಗೊಳ್ಳಿಯಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಿಗಾಗಿ ಈಗಾಗಲೇ ಒಟ್ಟು ೧೨೦ ಕೋಟಿ ಅನುದಾನ ಬಿಡುಗಡೆಯಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ದೇಶಭಕ್ತ ರಾಯಣ್ಣನ ಹೆಸರಲ್ಲಿ ಪ್ರಾಧಿಕಾರದಿಂದ ವಿವಿಧೆಡೆ ಸಮುದಾಯ ಭವನಗಳನ್ನು ನಿರ್ಮಿಸುವ ಉದ್ದೇಶವನ್ನೂ ಹೊಂದಿರುವುದಾಗಿ ವಿವರಿಸಿದರು.
ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿ, ಈ ನೆಲದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ನೆಲದ ಋಣ ತೀರಿಸಬೇಕು, ಸಂಗೊಳ್ಳಿ ರಾಯಣ್ಣ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಇತಿಹಾಸದಲ್ಲಿ ಅಮರನಾಗಿದ್ದಾನೆ. ರಾಯಣ್ಣನ ಪುಣ್ಯಭೂಮಿಯಲ್ಲಿ ವಾಸಿಸುತ್ತಿರುವ ನಾವೆಲ್ಲರೂ ರಾಯಣ್ಣ ಸೇರಿದಂತೆ ನಮ್ಮ ನಾಡಿನ ದಾರ್ಶನಿಕರ ಮತ್ತು ಇತಿಹಾಸ ಪುರುಷರ ಜೀವನ ಸಾಧನೆಯ ಬಗ್ಗೆ ಅಧ್ಯಯನ ಕೈಗೊಳ್ಳಬೇಕು. ಇದೇ ಉದ್ದೇಶದಿಂದ ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲ ದಾರ್ಶನಿಕರು ಮತ್ತು ಇತಿಹಾಸ ಪುರುಷರ ಜಯಂತಿ ಆಚರಣೆಗೆ ಚಾಲನೆ ನೀಡಿರುವುದಾಗಿ ವಿವರಿಸಿದರು.
ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಮಾತನಾಡಿ, ನಾಡಿನ ಸಮಸ್ತ ತಾಯಂದಿರು ತಮ್ಮ ಮಕ್ಕಳಿಗೆ ಸಂಗೊಳ್ಳಿ ರಾಯಣ್ಣನ ಚರಿತ್ರೆಯನ್ನು ತಿಳಿಸುವ ಮೂಲಕ ಮಕ್ಕಳಲ್ಲಿ ದೇಶಾಭಿಮಾನವನ್ನು ಚಿಕ್ಕಂದಿನಿಂದಲೇ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
170 ಕೋಟಿ ರೂ. ಅನುದಾನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಡಾ.ಅಂಜಲಿ ನಿಂಬಾಳಕರ ಮಾತನಾಡಿ, ತಾವು ಶಾಸಕರಾಗಿ ಅಧಿಕಾರ ಸ್ವೀಕರಿಸಿದ ೮ ತಿಂಗಳ ಅವಧಿಯಲ್ಲಿ ಒಟ್ಟು ೧೭೦ ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದು, ಈಗಾಗಲೇ ಈ ಅನುದಾನಗಳಡಿ ತಾಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಖಾನಾಪುರ ಪಟ್ಟಣದಲ್ಲಿ ಶೀಘ್ರದಲ್ಲೇ ೬೦ ಬೆಡ್‌ಗಳ ನೂತನ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಕಡತ ಮಂಜೂರಾತಿ ಹಂತದಲ್ಲಿದೆ. ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಜಾತಿ, ಮತ, ಭಾಷೆಯ ತಾರತಮ್ಯ ಮಾಡದೇ ಇಡೀ ತಾಲೂಕಿನ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದು, ನಂದಗಡದಲ್ಲೂ ಆದಷ್ಟು ಬೇಗ ರಾಯಣ್ಣನ ವೀರಭೂಮಿಯ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವಂತೆ ಗಮನಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ, ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಧ್ಯಯನ ಸಮಿತಿಯ ಅಧ್ಯಕ್ಷ ಹೆಚ್.ಎಂ ರೇವಣ್ಣ, ಶಾಸಕರಾದ ಭೈರತಿ ಬಸವರಾಜ, ಮಹಾಂತೇಶ ಕೌಜಲಗಿ, ನಂದಗಡ ಗ್ರಾಪಂ ಅಧ್ಯಕ್ಷ ಪ್ರಭು ಪಾರಿಶ್ವಾಡಕರ, ಪಿಡಿಒ ಕೆ.ಎಸ್ ಗಣೇಶ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬ್ಲಾಕ್ ಅಧ್ಯಕ್ಷ ಮಹಾದೇವ ಕೋಳಿ, ಮುಖಂಡರಾದ ಲಕ್ಷ್ಮಣರಾವ್ ಚಿಂಗಳೆ, ಸಿ.ಜಿ ವಾಲಿ, ಮಹಾಂತೇಶ ರಾಹುತ, ಮಹಾಂತೇಶ ಕಲ್ಯಾಣಿ, ಆರ್.ಡಿ ಹಂಜಿ, ಮಹಾಂತೇಶ ವಾಲಿ, ಶಂಕರ ಸೋನೊಳಿ, ಎನ್.ಐ ಕೊಡೊಳಿ, ಗಂಗಾಧರ ಜವಳಿ, ಅಶೋಕ ಅಂಗಡಿ, ಚಂಬಣ್ಣ ಹೊಸಮನಿ, ವಿಜಯ ಸಾಣಿಕೊಪ್ಪ, ವಿ.ಎಂ ತುರಮರಿ ಸೇರಿದಂತೆ ನಂದಗಡ ಹಾಗೂ ಸುತ್ತಲಿನ ಗ್ರಾಮಗಳ ನಾಗರಿಕರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಯಣ್ಣನ ಮ್ಯೂಜಿಯಂ ಮತ್ತು ವೀರಭೂಮಿಗಳ ನಿರ್ಮಾಣಕ್ಕೆ ಭೂದಾನ ನೀಡಿದವರನ್ನು ವೇದಿಕೆ ಮೇಲಿನ ಗಣ್ಯರು ಸತ್ಕರಿಸಿದರು. ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಣ್ಣ ಸನಿವಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ವಿವೇಕ ಕುರಗುಂದ ವಂದಿಸಿದರು.
ನಂದಗಡ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸಚಿವರು ಮತ್ತು ಗಣ್ಯರು ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಗೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದರು. ಬಳಿಕ ನಂದಗಡ ಗ್ರಾಮದ ರಾಯಣ್ಣನ ಸಮಾಧಿ, ಗ್ರಾಪಂ ಕಚೇರಿ ಮತ್ತು ರಾಯಣ್ಣನನ್ನು ಗಲ್ಲೆಗೇರಿಸಿದ ಸ್ಥಳಗಳಿಗೆ ಭೇಟಿ ನೀಡಿದರು.