ಪ್ರಗತಿವಾಹಿನಿ ಸುದ್ದಿ; ಹೊಸೂರ: 5 ಶತಮಾನಗಳಿಂದ ಹಿಂದೂಗಳ ಭಾವನೆಯಂತೆ ನಮ್ಮ ಜೀವಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮ ಸೌಭಾಗ್ಯ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದ್ದಾರೆ.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀರಾಮನ ಕೃಪೆಯಿಂದ ಮಂದಿರ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ನಮಗೆಲ್ಲ ದೊರೆತಿದೆ. ಈ ರಾಷ್ಟ್ರ ಮಂದಿರ ನಿರ್ಮಾಣದ ಕಾರ್ಯವನ್ನು ಜಾತಿ, ಮತ ಪಂತ ಹಾಗೂ ಪಕ್ಷ ಬೇದ ಮರೆತು ನಾವೆಲ್ಲ ಒಂದು ಎನ್ನುವ ಸಾಮರಸ್ಯದ ಸಂಕೇತವಾಗಿ ಭವ್ಯ ರಾಮ ಮಂದಿರ ನಿರ್ಮಾಣದಲ್ಲಿ ಶ್ರಮವಹಿಸಿ ನಿಧಿ ಸಂಗ್ರಹ ಕಾರ್ಯ ಮಾಡೋಣ ಎಂದು ಹೇಳಿದರು.
ಮಾಜಿ ಶಾಸಕ ಜಗದೀಶ ಮೆಟಗುಡ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಸರ್ಕಾರದ ಅಥವಾ ಶಾಸಕರ ಸಂಸದರ ಅನುದಾನದಡಿಯಲ್ಲಿ ಮಂದಿರ ನಿರ್ಮಾಣವಾದರೆ ಜನಸಾಮಾನ್ಯರ ಮನಸ್ಸು ಮಂದಿರದ ಜೊತೆ ಬೆರೆಯಲಾರದು. ಆದ್ದರಿಂದ ಪ್ರತಿಯೊಬ್ಬ ಭಾರತೀಯನ ಅಳಿಲು ಸೇವೆಯ ಮೂಲಕ ಮಂದಿರ ನಿರ್ಮಾಣವಾದಲ್ಲಿ ಮಾತ್ರ ಅದು ರಾಷ್ಟ್ರ ಮಂದಿರವಾಗಲಿದೆ. ದೇಶದ ಜನತೆಗೆ ಹಾಗೂ ಮುಂದಿನ ಜನಾಂಗಕ್ಕೆ ಮರ್ಯಾದ ಪುರುಷೋತ್ತಮ ಶ್ರೀರಾಮನ ಚರಿತ್ರೆ ಪ್ರಪಂಚಕ್ಕೆ ದೊರೆಯುವ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ನೋಡುವ ಕಾಲ ನಮ್ಮದಾಗಲಿದೆ ಎಂದರು.
ತಾಲೂಕಾ ಕಾರ್ಯವಾಹ ಚಿದಂಬರ ಮೇಟಿ ಪ್ರಸ್ತಾವಿಕವಾಗಿ ಮಾತನಾಡಿ, ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ರಾಮ ಮಂದಿರ ಕನಸ್ಸು ನನಸಾಗುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮ ಪರಿಶ್ರಮದಿಂದ ಗಳಿಸಿದ ಹಣದಲ್ಲಿ ಸ್ವಲ್ಪವಾದರು ಸಮರ್ಪಣೆ ಮಾಡುವ ಮೂಲಕ ಕೈ ಜೋಡಿಸಬೇಕು. ಇದೊಂದು ಪಕ್ಷಾತೀತ ಜ್ಯಾತ್ಯಾತೀತವಾದ ಸಮರ್ಪಣಾ ಭಾವಣೆಯಿಂದ ನಿಧಿ ಅರ್ಪಿಸಬೇಕೆಂದರು.
ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, 2002 ರಲ್ಲಿ ಕರ ಸೇವಕರ ಮೇಲೆ ನಡೆದ ಗೊದ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ದಂಗೆ ನಡೆದು ಗ್ರಾಮಕ್ಕೆ ಗ್ರಾಮವೆ ಹೊತ್ತಿ ಉರಿದಿತ್ತು. ಆದರೆ ಇಂದು ರಾಮ ಮಂದಿರ ನಿರ್ಮಾಣಕ್ಕೆ ಗ್ರಾಮದ ಮುಸ್ಲಿಂರು ಮುಂದೆ ಬಂದು ಸಮಾಜದಿಂದ ವಂತಿಗೆ ಸೇರಿಸಿ 5 ಸಾವಿರ ರೂಪಾಯಿ ನಿಧಿ ಸಮರ್ಪಿಸಿದ್ದು ದೇಶಕ್ಕೆ ಭಾವೈಕ್ಯದ ಸಂದೇಶ ಸಾರುವದರೊಂದಿಗೆ ರಾಮ ಮಂದಿರ ನಿರ್ಮಾಣಕ್ಕೆ ನಮ್ಮದೂ ಸಾಥ್ ಇದೆ ಎಂಬುದನ್ನು ಸಾರಿ ಹೇಳಿದ್ದಾರೆ. ಇದರಿಂದ ಭಾರತ ಅನೇಕತೆಯಲ್ಲಿ ಏಕತೆ ಇದೆ ಎಂಬುದನ್ನು ಮತ್ತೆ ತೊರಿಸಿದೆ ಎಂದರು.
ಇದೇ ವೇಳೆ ಮುಸ್ಲಿಂರು ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ರೀತಿ ಅಡ್ಡಿಯಿಲ್ಲ. ಶತಮಾನಗಳ ಸಮಸ್ಯೆಗೆ ಪರಿಹಾರ ದೊರೆತ ನಂತರ ಹಿಂದೂ-ಮುಸ್ಲಿಂ ಒಟ್ಟಾಗಿ ಜೀವನ ನಡೆಸೊ ಕಾಲ ಬಂದಿರುವದು ಶ್ಲಾಘನೀಯ. ನಮ್ಮ ಕೈಲಾದಷ್ಟು ನಿಧಿ ಕೊಡುವದರೊಂದಿಗೆ ಗ್ರಾಮದ ಮುಸ್ಲಿಂ ಕುಟುಂಬದದಿಂದ 5 ಸಾವಿರ ರೂಪಾಯಿ ನಿಧಿ ಅರ್ಪಿಸಿರುವದರಿಂದ ಶ್ರೀ ರಾಮನ ಕೃಪೆಗೆ ಪಾತ್ರರಾಗಿದ್ದೇವೆ ಎಂದು ತಿಳಿದಿದ್ದೇವೆ ಎಂದು ಹೊಸೂರ ಕಟ್ಟಡ ಕಾರ್ಮಿಕ ಮುನೀರ ಶೇಖ ತಿಳಿಸಿದ್ದಾರೆ.
ವೇದಿಕೆಯ ಮೇಲೆ, ಈಶ್ವರಚಂದ್ರ ಇಂಗಳಗಿ, ಗುರುಪಾದ ಕಳ್ಳಿ, ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಚಳಕೊಪ್ಪ, ಜಗದೀಶ ಬೂದಿಹಾಳ, ಸುನೀಲ ಮರಕುಂಬಿ ಡಾ.ಮಹಾಂತೇಶ ಕಳ್ಳಿಬಡ್ಡಿ, ಪ್ರಶಾಂತ ಮಾಕಿ, ಗಂಗಾಧರ ಮೂಗಬಸವ, ಈರಣ್ಣ ಸಂಪಗಾಂವ ಇದ್ದರು. ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ ಸ್ವಾಗತಿಸಿದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ನಿರೂಪಿಸಿದರು. ಮಡಿವಾಳಪ್ಪ ಚಳಕೊಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಕು.ಸಿಂಧು ವಕ್ಕುಂದ ರಾಮನ ವೇಷದಲ್ಲಿ ಕಾಣಿಸಿಕೊಂಡು ಕಾರ್ಯಕ್ರಮದಲ್ಲಿ ಆಕರ್ಷಣಿಯ ಕೇಂದ್ರವಾಗಿದ್ದಳು. ಬಸವರಾಜ ವಿವೇಕಿ, ಮೋಹನ ವಕ್ಕುಂದ, ಗೌಡಪ್ಪ ಹೊಸಮನಿ, ಮಲ್ಲಿಕಾರ್ಜುನ ವಕ್ಕುಂದ, ಸೋಮಪ್ಪ ಸಂಗೊಳ್ಳಿ, ಸಂಜು ಪಾಟೀಲ, ಸಂತೋಷ ಆರೇರ, ಮುನೀರ ಶೇಖ, ದೀಲಾವಾರ ದುಪದಾಳ, ಅಮೀನ ಜಮಾದಾರ, ಉಮೇಶ ಬೋಳತ್ತಿನ, ಬಸವರಾಜ ಹುಂಬಿ ನೂರಾರು ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ