ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕೇವಲ 6 ದಿನಗಳು ಮಾತ್ರ ಬಾಕಿ ಇದೆ. ರಾಮ ಮಂದಿರದ ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ವಿಗ್ರಹವ್ವೇ ಫೈನಲ್ ಆಗಿದೆ ಎಂದು ರಾಮಜನ್ಮ ಭೂಮಿ ಟ್ರಸ್ಟ್ ಅಧಿಕೃತ ಘೋಷಣೆ ಮಾಡಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರವೇ ಆಯ್ಕೆಯಾಗಿದೆ ಎಂದು ಹೇಳಲಾಗಿತ್ತಾದರೂ ರಾಮ ಜನ್ಮಭೂಮಿ ಟ್ರಸ್ಟ್ ಇನ್ನೂ ಅಂತಿಮವಾಗಿ ಆಯ್ಕೆ ಮಾಡಿಲ್ಲ ಎಂದು ತಿಳಿಸಿತ್ತು. ಆದರೆ ಮಕರ ಸಂಕ್ರಮಣದ ದಿನವಾದ ಇಂದು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು, ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿಯನ್ನು ರಾಮ ಮಂದಿರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪಣೆಗೆ ಆಯ್ಕೆ ಮಾಡಲಾಗಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿರುವ ಶಿಲೆ ಕರ್ನಾಟಕದ ಹೆಗ್ಗಡದೇವನ ಕೋಟೆಯ ಕೃಷ್ಣಶಿಲೆಯಾಗಿದ್ದು, ಈ ಶಿಲೆಯಿಂದ ಅರುಣ್ ಯೋಗಿರಾಜ್ 5 ವರ್ಷದ ಧನಸ್ಸುಧಾರಿ ಬಾಲರಾಮನ ವಿಗ್ರಹವನ್ನು ಕೆತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ಕಲಾವಿದ ಕೆತ್ತಿರುವ ವಿಗ್ರಹ ಪ್ರಾಣಪ್ರತಿಷ್ಠಾಪನೆಗೊಂದು ಪೂಜಿಸಲ್ಪಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಇನ್ನು ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾ ಮುಹೂರ್ತವನ್ನು ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಇಟ್ಟಿದ್ದಾಗಿ ಚಂಪತ್ ರಾಯ್ ತಿಳಿಸಿದ್ದಾರೆ. ರಾಮ ಮಂದಿರ ಧಾರ್ಮಿಕ ವಿಧಿವಿಧಾನಗಳು ಜ.16ರಿಂದ ಆರಂಭವಾಗಲಿದ್ದು ಜ.21ರವರೆಗೆ ನಡೆಯಲಿದೆ. ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ