ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಟಿಕೆಟ್ ಗಾಗಿ ತಮ್ಮ ತಮ್ಮೊಳಗೇ ಪೈಪೋಟಿ ನಡೆಸಿದ್ದ 7 ಜನರು ಟಿಕೆಟ್ ವಂಚಿತರಾದ ನಂತರ ಎಲ್ಲರೂ ಒಂದಾದರು!
ರಾಮದುರ್ಗ ಕ್ಷೇತ್ರದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಸೇರಿದಂತೆ ಸ್ಥಳೀಯ 7 ಜನರು ಬಿಜೆಪಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಬಿಜೆಪಿ ಚಿಕ್ಕರೇವಣ್ಣ ಅವರಿಗೆ ಟಿಕೆಟ್ ನೀಡಿದೆ. ಚಿಕ್ಕರೇವಣ್ಣ ಮೂಲತಃ ಬೆಂಗಳೂರಿನವರು. 2 -3 ವರ್ಷಗಳ ಹಿಂದೆ ಸಮಾಜ ಸೇವೆ ಹೆಸರಿನಲ್ಲಿ ರಾಜಕೀಯ ಉದ್ದೇಶವಿಟ್ಟುಕೊಂಡು ರಾಮದುರ್ಗಕ್ಕೆ ಬಂದು ವಾಸಿಸುತ್ತಿದ್ದರು.
25 -30 ವರ್ಷದಿಂದ ಪಕ್ಷ ಕಟ್ಟಿದ ಸ್ಥಳೀಯರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎನ್ನುವುದು ಉಳಿದ 7 ಜನರ ಆರೋಪ. ಗುರುವಾರ ಸಭೆ ಸೇರಿದ್ದ 7 ಜನರು ಒಂದಾದರು. ನಮ್ಮೊಳಗೆ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಸೇರಿ ಗೆಲ್ಲಿಸಿಕೊಂಡು ಬರೋಣ. ಇಲ್ಲವಾದಲ್ಲಿ ನಮ್ಮೊಳಗೆ ಒಬ್ಬರು ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಎನ್ನುವ ನಿರ್ಧಾರಕ್ಕೆ ಬಂದರು.
ಸಭೆ ನಡೆಯುತ್ತಿದ್ದ ವೇಳೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹಾದೇವಪ್ಪ ಯಾದವಾಡ ಅವರಿಗೆ ಫೋನ್ ಮಾಡಿ, 2 ದಿನ ತಾಳ್ಮೆಯಿಂದ ಕಾಯಿರಿ. ಹಲವು ಬದಲಾವಣೆಗಳಾಗಲಿವೆ. ಅಲ್ಲಿಯವರೆಗೆ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದರು ಎಂದು ಮಹಾದೇವಪ್ಪ ಯಾದವಾಡ ತಿಳಿಸಿದರು.
ಈ ಮಧ್ಯೆ ಚಿಕ್ಕರೇವಣ್ಣ ಅವರು ಮಹಾದೇವಪ್ಪ ಯಾದವಾಡ ಅವರ ಮನೆಗೆ ತೆರಳಿ ಬೆಂಬಲ ಯಾಚಿಸಿದರು. ಯಾದವಾಡ ಅವರನ್ನು ಸನ್ಮಾನಿಸಲೂ ಮುಂದಾದರು. ಆದರೆ ಸನ್ಮಾನ ತಿರಸ್ಕರಿಸಿದ ಯಾದವಾಡ, ಯಾವುದೇ ಕಾರಣದಿಂದ ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದು ಮುಖದ ಮೇಲೆ ಹೊಡೆದಂತೆ ಹೇಳಿ ಕಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ