*ಬೆಳಗಾವಿ:ವಿಶ್ವಭಾವೈಕ್ಯ ಮಂದಿರದ ವಾರ್ಷಿಕೋತ್ಸವ: ಆಧ್ಯಾತ್ಮಿಕ ಸಮ್ಮೇಳನ, ಗೀತ ರಾಮಾಯಣ ಸಂಪನ್ನ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿಯ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ನಡೆಯುತ್ತಿರುವ 20 ನೇ ವಾರ್ಷಿಕೋತ್ಸವದ ಅಂಗವಾಗಿ ಮೂರನೆ ಮತ್ತು ಕೊನೆಯ ದಿನವಾದ ರವಿವಾರ ಆಧ್ಯಾತ್ಮಿಕ ಸಮ್ಮೇಳನ ಮತ್ತು ಗೀತ ರಾಮಾಯಣ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗುಜರಾತಿನ ರಾಜಕೊಟ್ ರಾಮಕೃಷ್ಣ ಮಿಷನ್ ಆಶ್ರಮದ ಪೂಜ್ಯ ಸ್ವಾಮಿ ನಿಖಿಲೇಶ್ವರಾನಂದಜೀ ಮಹಾರಾಜ್ ಅವರು “ಶಾಂತಿಯ ಹುಡುಕಾಟದಲ್ಲಿ ಆಧುನಿಕ ಮಾನವ” ಎಂಬ ವಿಷಯದ ಕುರಿತು ಮಾತನಾಡಿ, ಮನಃಶಾಂತಿಗಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 15 ನಿಮಿಷ ಮೀಸಲಿಡಬೇಕು. ಈ 15 ನಿಮಿಷದಲ್ಲಿ ಮೊದಲ ಐದು ನಿಮಿಷ ಧ್ಯಾನಕ್ಕಾಗಿ, ಎರಡನೇ ಐದು ನಿಮಿಷ ಶ್ರೇಷ್ಢ ಗ್ರಂಥ ಓದಲು, ಕೊನೆಯ ಐದು ನಿಮಿಷ ಸದ್ ವಿಚಾರಗಳನ್ನು ತಿಳಿಯಲು ಮೀಸಲಿಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ “ದಿವ್ಯತ್ರಯರ ಭಾವಸಂಗಮ” ಎಂಬ ವಿಷಯದ ಬಗ್ಗೆ ಮಾತನಾಡಿದ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಹೆಚ್. ಎನ್.ಮುರಳೀಧರ ಅವರು, ರಾಮಕೃಷ್ಣ ಪರಮಹಂಸರ ಸಮನ್ವಯ ದರ್ಶನದ ಕುರಿತು ಹೇಳುತ್ತಾ ಸತ್ಯನಿಷ್ಠೆ ಎನ್ನುವುದು ಜಟಾಧರ (ರಾಮಕೃಷ್ಣ ಪರಮಹಂಸರ) ತನುಮನದಲ್ಲಿ ತುಂಬಿಕೊಂಡಿತ್ತು ಎಂದರು.
ಬೆಂಗಳೂರಿನ ರಾಮಕೃಷ್ಣ ಮಠದ ಪೂಜ್ಯ ಸ್ವಾಮಿ ವೀರೇಶಾನಂದಾಜೀ ಮಹಾರಾಜ್ “ಶ್ರೀ ರಾಮಕೃಷ್ಣರ ನಾಲ್ಕು ಮಹಾ ವಾಕ್ಯಗಳು” ಎಂಬ ವಿಷಯದ ಕುರಿತು ಮಾತನಾಡಿ, “ಸತ್ಯ, ತ್ಯಾಗ, ಸೇವೆ, ವೈರಾಗ್ಯ ಮತ್ತು ನಿಸ್ವಾರ್ಥತೆ ಇವುಗಳ ಸಹಾಯದಿಂದ ಮನಸ್ಸು, ಮಾತು ಮತ್ತು ಕರ್ಮ ಮೂರು ಒಂದೇ ರೀತಿಯಾಗುವವು” ಎಂದು ತಿಳಿಸಿದರು.
ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿ ಆಡಿದರು.
ಕಾರ್ಯಕ್ರಮಕ್ಕೆ ಬೆಳಗಾವಿಯ ವಿವಿಧ ಭಾಗಗಳಿಂದ 550ಕ್ಕೂ ಹೆಚ್ಚು ಸದ್ಭಕ್ತರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.
ಸಂಜೆ 6 ರಿಂದ 8 ರವರೆಗೆ ಮರಾಠಿಯಲ್ಲಿ ಶ್ರೀ ದತ್ತ ಚಿತಾಳೆ ಅವರ ಸಾರಥ್ಯದಲ್ಲಿ ಗೀತ ರಾಮಾಯಣ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಜರುಗಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ