ಪ್ರಗತಿವಾಹಿನಿ ಸುದ್ದಿ; ರಾಮನಗರ: ನಿಗದಿತ ಸಮಯದಲ್ಲಿ ಯೋಜನೆಗಳನ್ನು ಮುಗಿಸದೇ ಇದ್ದಲ್ಲಿ ಯೋಜನೆಯ ಮೊತ್ತ ಹೆಚ್ಚಾಗುತ್ತದೆ. ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಹಣ ಮತ್ತು ಸಮಯವನ್ನು ಸಂಪೂರ್ಣವಾಗಿ ಒದಗಿಸಿ ಯೋಜನೆಗಳನ್ನು ಪೂರ್ಣಗೊಳಿಸಿದಾಗ ಜನರಿಗೆ ಮುಟ್ಟಿಸಲು ಸಾಧ್ಯವಿದೆ. ಹಾಗಾಗಿ ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಈ ವಿಷಯ ಹೇಳಿದರು.
ಜಿಟಿಟಿಸಿ – ಬಹಳ ಉಪಯುಕ್ತವಾಗಿರುವ ತಾಂತ್ರಿಕ ಸಂಸ್ಥೆ. ಇಲ್ಲಿ ಪ್ರಮಾಣ ಪತ್ರ ಪಡೆದರೆ ಶೇ 100 ರಷ್ಟು ಕೆಲಸ ಸಿಗುವುದು ಖಾತ್ರಿ. ಆ ವಿಶ್ವಾಸಾರ್ಹತೆ ಜಿಟಿಟಿಸಿ ಗಿದೆ. ತಾವು ಖುದ್ದು ಇಂಜಿನಿಯರಿಂಗ್ ಕಲಿತ ನಂತರ 6 ತಿಂಗಳ ಕಾಲ ಜಿಟಿಟಿಸಿ ನಲ್ಲಿ ತರಬೇತಿ ಪಡೆಡಿದ್ದು ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿದ್ದ ಬಗ್ಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು. ಈ ಭಾಗದ ಮಕ್ಕಳ ಬದುಕಿನಲ್ಲಿಯೂ ಜಿಟಿಟಿಸಿ ಯಶಸ್ಸಿನ ಮೆಟ್ಟಿಲಾಗಲಿ ಎಂದರು.
ಸರ್ಕಾರ 50 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನದಲ್ಲಿ ಜಿಟಿಟಿಸಿಗಳನ್ನು ಉನ್ನತೀಕರಿಸಲಾಗಿದೆ. ಹಿಂದುಳಿದ ತಾಲ್ಲೂಕುಗಳಲ್ಲಿಯೂ ಈ ಸಂಸ್ಥೆಗಳನ್ನು ತೆರೆಯಬೇಕು. ಕಳೆದ 2 ವರ್ಷಗಳಲ್ಲಿ ಪ್ರತಿ ಐಟಿಐಗೆ ತಲಾ 30 ಕೊಟಿ ರೂ.ಗಳನ್ನು 150 ಐಟಿಐಗಳನ್ನು ಸಹ ಸರ್ಕಾರ ಟಾಟಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಉನ್ನತೀಕರಿಸಿದೆ. 4000 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚಮಾಡಿದೆ. ಸಮಕಾಲೀನ ಉದ್ಯೋಗಕ್ಕೆ ಯುವಕರನ್ನು ತಯಾರು ಮಾಡಲು ಉನ್ನತೀಕರಿಸಿದ ಐಟಿಐಗಳು ಸಹಕಾರಿಯಾಗಲಿವೆ. ಇಡೀ ದೇಶದಲ್ಲಿ ಇದನ್ನು ಸಾಧಿಸಿದ ಪ್ರಥಮ ರಾಜ್ಯ ಕರ್ನಾಟಕ ಎಂದರು.
ಎಲ್ಲರಿಗೂ ಉದ್ಯೋಗ ಕಾರ್ಯಕ್ರಮವನ್ನು ಪ್ರತಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅರ್ಹತೆಯನುಗುಣವಾಗಿ ಯುವಕರಿಗೆ ಉದ್ಯೋಗ ದೊರೆಯಲು ತರಬೇತಿ, ಅವಕಾಶಗಳನ್ನು, ವ್ಯಕ್ತಿತ್ವ ವಿಕಸನ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.
ನೀರಾವರಿ ಯೋಜನೆಗಳು:
ಮಂಚಿನಬೆಲೆಯಿಂದ ಈ ಭಾಗದ 3 ತಾಲ್ಲೂಕುಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ ಇದೆ. ಜಲ್ ಜೀವನ್ ಮಿಷನ್ ಯೋಜನೆ ಪ್ರಧಾನ ಮತ್ರಿ ನರೇಂದ್ರ ಮೋದಿಯವರ ಕನಸಿನ ಕೂಸು. ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸಲು ಹಣಕಾಸಿನ ನೆರವನ್ನು ನೀಡಿದ್ದಾರೆ. ಇದು ಮಾಡಲು ಕೇವಲ ಒಬ್ಬ ಮುತ್ಸದ್ದಿಗೆ ಮಾತ್ರ ಸಾಧ್ಯ ಎಂದರು. ಮುಂದಿನ ಜನಾಂಗಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಮುಗಿಸಬೇಕೆನ್ನುವ ದಿಟ್ಟ ತೀರ್ಮಾನವನ್ನು ಪ್ರಧಾನಿಗಳು ಮಾಡಿದ್ದಾರೆ. ಒಂದೂವರೆ ವರ್ಷದಲ್ಲಿ ನೀರು ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆಯಿತ್ತರು. ಜಲಜೀವನ್ ಮಿಷನ್ ಯೋಜನೆಯನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಹೇಮಾವತಿ ಜಲಾಶಯದಿಂದ ನೀರಿನ ಹಂಚಿಕೆ, ಟಿಬಿಸಿ ತುಮಕೂರು, ನಾಗಮಂಗಲ ಮತ್ತು ಹಾಸನದ ಬ್ರಾಂಚ್ ಕಾಲುವೆಗಳ ಬಗ್ಗೆ ಮಾಹಿತಿ ಇದ್ದು, ನೀರಿನ ಹಂಚಿಕೆ ಬಗ್ಗೆ ಅಮೂಲಾಗ್ರವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳಾಗಿವೆ. ಇವುಗಳ ಪ್ರಗತಿ ಪರಿಶೀಲನೆ ಮಾಡಿ ಈ ಯೋಜನೆಗಳ ಕಟ್ಟಕಡೆಯ ತಾಲ್ಲೂಕುಗಳ ಸಮುದಾಯಗಳನ್ನು ಮುಟ್ಟಿಸಲು ಕಾಯಕಲ್ಪವನ್ನು ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು. ಬಾನಂದೂರು, ವೀರಾಪುರ ಮುಂತಾದ ಪವಿತ್ರ ಸ್ಥಳಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ರಾಮನಗರ ವಿಶಿಷ್ಟ ಜಿಲ್ಲೆ. ಜಿಲ್ಲೆಯ ಅಭಿವೃದ್ಧಿಗೆ ಕಂಕಣ ಬದ್ಧನಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಡಾ. ಕೆ. ಸುಧಾಕರ್, ಬಿ. ಎ. ಬಸವರಾಜ, ಮಾಗಡಿ ಶಾಸಕ ಮಂಜುನಾಥ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ