ಸಿಎಂ ಎದುರಲ್ಲೇ ಸಚಿವರು-ಸಂಸದರ ನಡುವೆ ಗಲಾಟೆ; ವೇದಿಕೆ ಮೇಲೆ ಅಶ್ವತ್ಥನಾರಾಯಣ ಮೇಲೆ ಹಲ್ಲೆಗೆ ಮುಂದಾದ ಡಿ.ಕೆ.ಸುರೇಶ್ ಬೆಂಬಲಿಗರು
ಪ್ರಗತಿವಾಹಿನಿ ಸುದ್ದಿ; ರಾಮನಗರ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ವಿವಿಧ ಯೋಜನೆಗಳ ಚಾಲನೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಸಚಿವ ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಕಿತ್ತಾಡಿಕೊಂಡ ಘಟನೆ ನಡೆದಿದೆ.
ರಾಮನಗರಕ್ಕೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಸಿಎಂ ಸಮ್ಮುಖದಲ್ಲೇ ವೇದಿಕೆ ಮೇಲೆ ಸಚಿವ ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಗಲಾಟೆ ನಡೆದು ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಕೆಲವರು ವೋಟ್ ಪಡೆದು ಸುಮ್ಮನೇ ಕುಳಿತಿದ್ದಾರೆ. ಎಲ್ಲಾ ಕಾಮಗಾರಿ, ಕಾರ್ಯಕ್ರಮಗಳಿಗೂ ನಮ್ಮ ಕಾಲದಲ್ಲಿಯೇ ಅಡಿಗಲ್ಲು ಹಾಕಲಾಗಿದೆ, ನಮ್ಮ ಕಾಲದಲ್ಲೇ ಚಾಲನೆ ನೀಡಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳುತ್ತಿದ್ದಂತೆ ಕುರ್ಚಿಯಿಂದ ಎದ್ದು ಬಂದ ಡಿ.ಕೆ.ಸುರೇಶ್ ಬಂದು ಭಾಷಣ ಮಾಡುವ ಬದಲು ಕೆಲಸದಲ್ಲಿ ಸಾಮರ್ಥ್ಯ ತೋರಿಸಿ ಎಂದಿದ್ದಾರೆ. ಅಲ್ಲದೇ ಡಿ.ಕೆ.ಸುರೇಶ್ ಬೆಂಬಲಿಗರು ಸಚಿವರು ಮಾತನಾಡುತ್ತಿದ್ದ ಮೈಕ್ ಕಿತ್ತೆಸದಿದ್ದಾರೆ. ಆಕ್ರೋಶಗೊಂಡ ಸಚಿವ ಅಶ್ವತ್ಥನಾರಾಯಣ, ಸಿಎಂ ರಾಜಕಾರಣಕ್ಕಾಗಿಬಂದಿಲ್ಲ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗಮಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಅಗೌರವ ತೋರುವುದು ಸರಿಯಲ್ಲ ಎಂದಿದ್ದಾರೆ. ಇನ್ನಷ್ಟು ಕೆರಳಿ ಕೆಂಡವಾದ ಡಿ.ಕೆ.ಸುರೇಶ್ ಹಾಗೂ ಬೆಂಬಲಿಗರು ಸಚಿವರ ಮೇಲೆ ಮುಗಿಬಿದ್ದಿದ್ದಾರೆ. ಪೊಲೀಸರು ಬಂದು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಂತೆಯೇ ವೇದಿಕೆ ಮೇಲೆಯೇ ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ತಮ್ಮ ಎದುರಲ್ಲೇ ಸಚಿವರು ಹಾಗೂ ಸಂಸದರ ನಡುವೆ ನಡೆದ ಗಲಾಟೆ, ಘರ್ಷಣೆಗೆ ಅವಾಕ್ಕಾದ ಸಿಎಂ ಒಂದೇ ನಿಮಿಷದಲ್ಲಿ ಭಾಷಣ ಮೊಟಕುಗೊಳಿಸಿದ್ದಾರೆ. ವೇದಿಕೆ ಮೇಲೆ ಜನಪ್ರತಿನಿಧಿಗಳ ನಡುವಿನ ಕಿತ್ತಾಟಕ್ಕೆ ಸಾರ್ವಜನಿಕರು ಮೂಕಪ್ರೇಕ್ಷರಾಗಿದ್ದಾರೆ.
3ನೇ ಅಲೆ ಬಿಂಬಿತವಾಗಿದೆ; ಮಿನಿ ಲಾಕ್ ಡೌನ್ ಸುಳಿವು ಕೊಟ್ಟ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ