
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಮನಗರ ಜಿಲ್ಲೆಯನ್ನು ’ನವಬೆಂಗಳೂರು’ ಎಂದು ಮರುನಾಮಕರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಚರ್ಚೆ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಿಎಂ ಬಿ ಎಸ್ ಯಡಿಯೂರಪ್ಪ, ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಗೆ ನವಬೆಂಗಳೂರು ಎಂದು ಮರು ನಾಮಕರಣ ಮಾಡಲಾಗುತ್ತಿದೆ ಎಂದು ರಾಜ್ಯಾದ್ಯಂತ ಚರ್ಚೆಗಳು ಆರಂಭವಾಗಿತ್ತು, ಈ ಹಿನ್ನಲೆಯಲ್ಲಿ ಸರ್ಕಾರದ ನಡೆಯನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಾಪಕವಾಗಿ ಖಂಡಿಸಿದ್ದರು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಿಎಂ ಬಿಎಸ್ವೈ, ರಾಮನಗರ ಜಿಲ್ಲೆ ಮರುನಾಮಕರಣದ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರಕಾರದ ಮುಂದೆ ಅಂತಹ ಯಾವುದೇ ಯೋಚನೆ ಇಲ್ಲ ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಯಾವುದೇ ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿದ್ದಾರೆ. ಬಹುಶ: ಆ ಎರಡು ಪಕ್ಷಗಳ ನಾಯಕರುಗಳು ಸುದ್ದಿಯಲ್ಲಿರಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಸರ್ಕಾರದ ಎದುರು ಇಂತಹ ಯಾವುದೇ ವಿಷಯವಾಗಲೀ, ಅಥವಾ ಕಾರ್ಯಸೂಚಿಯಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ