Kannada NewsLatestPolitics

*ಡಿ.ಕೆ.ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಲಿ: ರಂಭಾಪುರಿ ಶ್ರೀಗಳ ಹಾರೈಕೆ*

ಪ್ರಗತಿವಾಹಿನಿ ಸುದ್ದಿ: “ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಶಕ್ತಿ ತುಂಬಿದ್ದು, ಚುನಾವಣೆ ನಂತರ ಅವರಿಗೆ ಉನ್ನತ ಸ್ಥಾನ ಸಿಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಆ ಸ್ಥಾನ ಸಿಗಲಿ” ಎಂದು ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಶ್ರೀಮದ್ ರಂಬಾಪುರಿ ಶ್ರೀಗಳು ಮಾತನಾಡಿದರು.

“ಕರ್ನಾಟಕದಲ್ಲಿ ಕಾಂಗ್ರೆಸ್ ‌ಪ್ರಚಂಡ ಬಹುಮತ ಗಳಿಸಲು ಡಿ.ಕೆ.ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾದ ನಂತರ ಬಹಳ ಶ್ರಮ ಪಟ್ಟಿರುವುದು ರಾಜ್ಯದ ಜನರಿಗೆ ತಿಳಿದಿದೆ. ಚುನಾವಣೆ ನಂತರ ನಡೆದಿರುವ ಒಳ ಒಪ್ಪಂದ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ತಿಳಿದಿದೆ. ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಆದ ಒಡಂಬಡಿಕೆಯಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೆ ಗೌರವವಿದೆ” ಎಂದರು.

“ನಾಯಕತ್ವದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಾಯಕರೇ ಅಲ್ಲಲ್ಲಿ ಮಾತನಾಡಿದ ವಿಚಾರ ಹೊರಬರುತ್ತಿದೆ. ಇದರ ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟಣೆ ನೀಡಿ ತಿಳಿಗೊಳಿಸಿದರೆ ಜನರಲ್ಲಿ ನೆಮ್ಮದಿ ಉಂಟಾಗಲಿದೆ.‌ ಶಿವಕುಮಾರ್ ಅವರಿಗೂ ಉನ್ನತ ಸ್ಥಾನ ಸಿಕ್ಕರೆ ಅವರಿಗೂ ಸಮಾಧಾನವಾಗಲಿದೆ. ಮುಖ್ಯಮಂತ್ರಿ ಸ್ಥಾನ ದೊರೆಯುವ ತನಕ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಿ ಎನ್ನುವ ತಾತ್ವಿಕತೆ ಪಕ್ಷದ ಉನ್ನತ ನಾಯಕರಿಗೆ ಇಲ್ಲ. ಆ ಸ್ಥಾನ ಭದ್ರ ಪಡಿಸಿದರೆ,‌ ಈ ಸ್ಥಾನ ಬಿಟ್ಟುಕೊಡುವುದರಲ್ಲಿ ಸಂದೇಹವಿಲ್ಲ. ರಾಷ್ಟ್ರೀಯ ನಾಯಕರು ಈ ಬಗ್ಗೆ ನಿರ್ಣಾಯಕತ್ಮಕವಾಗಿ ತಿಳಿಸದ ಹೊರತು ಬೇರೆಯವರು ತಿಳಿಸಿದರೆ ಪ್ರಯೋಜನವಿಲ್ಲ. ರಾಜಕೀಯದಲ್ಲಿ ರೀತಿ, ನೀತಿ, ನಿಯತ್ತು ಇರಬೇಕಾಗುತ್ತದೆ. ಈ ಹಿಂದೆ ಬಿಜೆಪಿಯಲ್ಲಿ ಆದಂತಹ ಘಟನೆ ನಮ್ಮಗೆಲ್ಲರಿಗೂ ತಿಳಿದಿದೆ. ಇದು ಕಾಂಗ್ರೆಸ್ ಅಲ್ಲಿ ಆಗಬಾರದು ಎಂಬುದು ನಮ್ಮ ಮಾತು” ಎಂದರು.

Home add -Advt

“ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ‌. ಆದರೆ ಈ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದವರು ಈ‌ ಮಾತನ್ನು ಹೇಳಿದರೆ ಬೇರೆ.‌ಆದರೆ ಆಡಳಿತ ಪಕ್ಷದವರೇ ಇದನ್ನು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಹೇಳುವುದಿಲ್ಲ. ಆದರೆ, ಅಭಿವೃದ್ಧಿ ಕೆಲಸಗಳನ್ನೂ ಮಾಡಬೇಕು ಎಂದು ಆಗ್ರಹಿಸುತ್ತೇನೆ. ನಾನು ಇಡೀ ರಾಜ್ಯ ‌ಪ್ರವಾಸ ಮಾಡುತ್ತಿದ್ದೇನೆ. ಯಾವುದೇ ಭಾಗಕ್ಕೆ ಹೋದರು ಜನರು ಇದೇ ಕೊರಗನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ತಿಳಿಸಿದರು.

“ಮೊನ್ನೆಯಷ್ಟೇ ಶಿವಕುಮಾರ್ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ದರ್ಶನ ಮಾಡಿ ಮಾಧ್ಯಮಗಳ ಜೊತೆ ಮಾತನಾಡುವಾಗ, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ಮಾತನ್ನು ಹೇಳಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ತಂದುಕೊಟ್ಟವರು ಡಿ.ಕೆ. ಶಿವಕುಮಾರ್. ಅವರು ಪಕ್ಷದ ಅಧ್ಯಕ್ಷರಾದ ಬಳಿಕ ಕ್ರಿಯಾಶೀಲರಾಗಿ, ಚುರುಕಾಗಿ ಪಕ್ಷ ಸಂಘಟಿಸಿದರು. ಚುನಾವಣೆ ನಂತರ ಅವರಿಗೆ ಉನ್ನತ ಸ್ಥಾನ ಸಿಗಬೇಕಾಗಿತ್ತು. ಆದರೆ ಪಕ್ಷದ ವರಿಷ್ಠರ ಭಾವನೆಗೆ ಸ್ಪಂದಿಸಿ, ಉದಾರ ಮನೋಭಾವದಿಂದ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿ, ಉತ್ತಮ ಕಾರ್ಯ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

“ರಾಜ್ಯದ ನಾಯಕರು ಹಾಗೂ ಪಕ್ಷದ ವರಿಷ್ಠರು ಮುಂದಿನ ದಿನಗಳಲ್ಲಿ ತಮ್ಮ ಒಡಂಬಡಿಕೆಯಂತೆ ಶಿವಕುಮಾರ್ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಆಗ ಇವರ ಪರಿಶ್ರಮ ಸಾರ್ಥಕವಾಗುತ್ತದೆ. ಶಿವಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ನಿರ್ಮಾಣವಾಗಲಿ, ರಾಜ್ಯದ ಶ್ರೇಯೋಭಿವೃದ್ಧಿ, ಬಡವರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಯುವಂತಾಗಲಿ” ಎಂದು ಆಶೀರ್ವದಿಸಿದರು.

“ಕೆಲವು ರಾಜಕಾರಣಿಗಳು ಸಮಾಜದಲ್ಲಿ, ಜಾತಿ ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ. ಹೀಗಾಗಿ ಸಮುದಾಯಗಳ ನಡುವೆ ಸಾಮರಸ್ಯ ಮೂಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಮಯ ಬಂದಾಗ ಶಿವಕುಮಾರ್ ಅವರು ದಿಟ್ಟ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಅವರು ನಂಬಿರುವ ದೈವ ಕೈ ಹಿಡಿದು ನಡೆಸಿ ಉನ್ನತ ಸ್ಥಾನಕ್ಕೆ ಮುನ್ನಡೆಸಲಿ” ಎಂದು ಹರಸಿದರು.

“ಒತ್ತಡದ ಕೆಲಸದ ನಡುವೆಯು ಜನರ ಮೇಲೆ ಅವರಿಗೆ ಅಭಿಮಾನ ಇಲ್ಲಿಗೆ ಬರುವಂತೆ ಮಾಡಿದೆ. ಶಿವಕುಮಾರ್ ಅವರು ಕೇವಲ ಕ್ಷೇತ್ರದ ಜನರ ಸಮಸ್ಯೆಗಳನ್ನು ‌ಬಗೆಹರಿಸುತ್ತಿಲ್ಲ, ರಾಜ್ಯದ ಎಲ್ಲಾ ಕ್ಷೇತ್ರದ ‌ಜನರ‌‌ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕರ ‌ಮೇಲೆ ಎಲ್ಲರ ಅಭಿಮಾನ ಅನವರತವಿರಲಿ. ಎಲ್ಲರೂ ಅವರ ಜೊತೆ ಇದ್ದರೆ ನಾಯಕರ ಸ್ಥಿರ ಭಾವನೆ ‌ಈ ಕ್ಷೇತ್ರದ‌ ಮೇಲೆ ದೃಡವಾಗಿ ಇರುತ್ತದೆ. ಈ ಭಾಗದ ಜನ‌ಸಮುದಾಯಕ್ಕೆ ಸೂಚ್ಯವಾಗಿ ಕರೆಯನ್ನು ಕೊಡುತ್ತೇನೆ” ಎಂದು ಕರೆ ನೀಡಿದರು.

ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ

ಚಾರಿತ್ರಿಕ ಇತಿಹಾಸದಲ್ಲಿ ಇಂದು ಸುದಿನ. ಬಿಜ್ಜಹಳ್ಳಿಯಲ್ಲಿ ಇಂದು ಹಲವು ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ರಂಭಾಪುರಿ ಪೀಠ ಪರಂಪರೆಯಲ್ಲಿ 119ನೇ ಪೀಠಾಧೀಶ್ವರರಾದ ವೀರ ಗಂಗಾಧರ ಶ್ರೀಗಳ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಟ್ಟಿರುವ ಭಕ್ತಿ, ಶ್ರದ್ಧೆ, ಅಭಿಮಾನವನ್ನು ವರ್ಣಿಸಲು ಶಬ್ಧಗಳಿಲ್ಲ.

ಗಂಗಾಧರ ಶ್ರೀಗಳ ಆಶೀರ್ವಾದದಿಂದ ತಮ್ಮ ಜೀವನದಲ್ಲಿ ಬಂದ ಕಷ್ಟಗಳು ಮಂಜಿನಂತೆ ಕರಗಿ ಮಾಯವಾಗಿವೆ ಎಂದು ಶಿವಕುಮಾರ್ ಅವರು ಬಹಳಷ್ಟು ಬಾರಿ ವ್ಯಕ್ತಪಡಿಸಿದ್ದಾರೆ. ಶಿವಕುಮಾರ್ ಅವರು ಈ ಕ್ಷೇತ್ರದ ಜನರ ಕಲ್ಯಾಣಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಶಿವಕುಮಾರ್ ಅವರು ದೇವರಲ್ಲಿ ಹಾಗೂ ಧರ್ಮದಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಅವರ ಮಾತಿನಲ್ಲಿ ಆಧ್ಯಾತ್ಮದ ಒಳತಿರುಳನ್ನು ಅರಿಯಬಹುದು. ಇಂತಹ ಮಾತುಗಳು ರಾಜಕಾರಣಿಗಳ ಬಾಯಲ್ಲಿ ಬರುವುದು ಕಷ್ಟ. ಅವರ ತಂದೆ ತಾಯಿ ಕೊಟ್ಟಿರುವ ಸಂಸ್ಕಾರದ ಪರಿಣಾಮ ಹಾಗೂ ಗಂಗಾಧರ ಶ್ರೀಗಳ ಮೇಲೆ ಇಟ್ಟಿರುವ ಅಪಾರ ಭಕ್ತಿಯಿಂದ ಅವರ ಬಾಯಲ್ಲಿ ಇಂತಹ ಮಾತುಗಳು ಬರುವಂತೆ ಮಾಡಿದೆ.

ಮಾನವ ಕಲ್ಯಾಣವೇ ಎಲ್ಲಾ ಧರ್ಮಗಳ ಉದ್ದೇಶ

“ಧರ್ಮ ಯಾವುದೇ ಆದರೂ ಅದೆಲ್ಲದರ ಮೂಲ ಉದ್ದೇಶ ಮಾನವ ಕಲ್ಯಾಣ. ಮನುಷ್ಯ ಮನುಷ್ಯನಾಗಿ ಬಾಳಿ ಬದುಕಬೇಕು ಎಂದು ಎಲ್ಲಾ ಧರ್ಮಗಳು ಸಾರುತ್ತವೆ.
ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಈ ಧರ್ಮ ಸ್ವೀಕಾರ ಮಾಡಿ, ಧರ್ಮವನ್ನು ಮತ್ತಷ್ಟು ಬೆಳೆಸಿದರು” ಎಂದು ತಿಳಿಸಿದರು.

“ಬಸವಣ್ಣನವರು ತಮ್ಮ ವಚನದಲ್ಲಿ ಶಿವ ಪಥವನರಿವಡೆ ಗುರು ಪಥವೇ ಮೊದಲು ಎಂಬ ಮಾತನ್ನು ವ್ಯಕ್ತಪಡಿಸಿದ್ದಾರೆ. ಭಗವಂತ ಒಬ್ಬನೇ, ಆತನಿಗೆ ಇರುವ ಹೆಸರುಗಳು ಅನಂತವಾಗಿವೆ. ಈ ಪರಮ ಸತ್ಯ ತಿಳಿದಾಗ ಸಮಾಜದಲ್ಲಿ ಯಾವುದೇ ರೀತಿಯ ಸಂಘರ್ಷ, ಸಮಸ್ಯೆಗಳು ಉದ್ಭವಿಸಿವುದಿಲ್ಲ. ಕಲಿಗಾಲದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ನಡೆಯಬಾರದ ಘಟನೆ ನಡೆಯುತ್ತಿರುವುದನ್ನು ನೋಡಿದರೆ ಆಧ್ಯಾತ್ಮಿಕ ಗುರುಗಳ ಮನಸ್ಸಿಗೆ ಬಹಳಷ್ಟು ನೋವಾಗುತ್ತದೆ” ಎಂದು ಹೇಳಿದರು.

“ಸಾಹಿತಿ ಸಿದ್ಧಯ್ಯ ಪುರಾಣಿಕರು ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು, ಶೂದ್ರ ವೈಶ್ಯನೆ ಆಗು, ದುಡಿದು ಗಳಿಸಿ ಏನಾದರೂ ಆಗು, ನಿನ್ನೊಲವಿನಂತಾಗು, ಏನಾದರೂ ಸರಿಯೆ – ಮೊದಲು ಮಾನವನಾಗು ಎಂದು ಹೇಳಿದ್ದಾರೆ” ಎಂದರು.

Related Articles

Back to top button