ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಕರ್ತರಾಗಿದ್ದ ರಮೇಶ್ ಜಾರಕಿಹೊಳಿ ಇದೀಗ ಸ್ವಯಂಕೃತ ಅಪರಾಧಕ್ಕೆ ತಾವೇ ಬಲಿಯಾಗಿದ್ದು, ರಮೇಶ್ ಜಾರಕಿಹೊಳಿ ಕಥೆ ಭಸ್ಮಾಸುರನ ಕಥೆಯನ್ನು ನೆನಪಿಸುವಂತಿದೆ.
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲ ತಮ್ಮ ಜೊತೆ ಇನ್ನೂ ಹಲವು ಸಚಿವ ಶಾಸಕರು ಸೇರಿ ಒಟ್ಟು 17 ಜನರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು, ಮುಂಬೈಗೆ ಹಾರಿದ್ದರು. ಮಿತ್ರಮಂಡಳಿಯನ್ನು ರಚಿಸುವ ಮೂಲಕ ಒಗ್ಗಟ್ಟಾಗಿ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರವನ್ನೇ ಉರುಳಿಸಿದ್ದರು.
ಈ ಪರಿಸ್ಥಿತಿಯ ಲಾಭಪಡೆದ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿಯವರಿಗೆ ಸಚಿವ ಸ್ಥಾನದ ಭರವಸೆ ನೀಡಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಎಂಟಿಬಿ ನಾಗರಾಜ್, ಶಿವರಾಮ್ ಹೆಬ್ಬಾರ್, ಹೆಚ್.ವಿಶ್ವನಾಥ್, ಮುನಿರತ್ನ ಸೇರಿದಂತೆ 17 ಶಾಸಕರ ಬೆಂಬಲ ಪಡೆದು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾದರು. ಅಂದು ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಶಾಸಕರನ್ನು ಬಿಜೆಪಿಗೆ ಸೇರ್ಪಡೆಯಾಗುವಂತೆ ಮನವೊಲಿಸುವಲ್ಲಿ ಸಾಹುಕಾರ್ ಪಾತ್ರ ಮಹತ್ವದ್ದಾಗಿತ್ತು. ಈ ಮೂಲಕ ಬಿಜೆಪಿ ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ನಿರ್ಣಾಯಕ ಪಾತ್ರ ವಹಿಸಿದ್ದರು.
ನೀಡಿದ್ದ ಭರವಸೆ, ಕೊಟ್ಟ ಮಾತಿನಂತೆಯೇ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ರಮೇಶ್ ಜಾರಕಿಹೊಳಿಗೆ ಬೃಹತ್ ಖಾತೆಯಾದ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿತ್ತು. ಉಳಿದ ಮಿತ್ರಮಂಡಳಿ ಸದಸ್ಯರಿಗೂ (ಹೆಚ್.ವಿಶ್ವನಾಥ್, ಮುನಿರತ್ನ, ಮಹೇಶ ಕುಮಟಳ್ಳಿ ಹೊರತುಪಡಿಸಿ) ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಲಾಯಿತು. ಸಚಿವ ಜಾರಕಿಹೊಳಿ ಉಪಮುಖ್ಯಮಂತ್ರಿ ಹುದ್ದೆಯ ಮೇಲೆಯೂ ಕಣ್ಣಿಟ್ಟಿದ್ದರು. ರಮೇಶ್ ಜಾರಕಿಹೊಳಿ ತಾವು ಬಯಸಿದಂತೆ ಉನ್ನತ ಮಂತ್ರಿ ಸ್ಥಾನವನ್ನು ಅಲಂಕರಿಸಿ, ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಾಗ ಇದೀಗ ಒಂದು ಹೆಣ್ಣಿನ ವ್ಯಾಮೋಹಕ್ಕೆ ಸಿಲುಕಿ ತಮ್ಮ ತಲೆಯ ಮೇಲೆ ತಾವೇ ಭಸ್ಮಾಸುರನಂತೆ ಕೈಯಿಟ್ಟುಕೊಂಡಂತಾಗಿದೆ. ಬಿಜೆಪಿ ಸರ್ಕಾರದಲ್ಲಿ ಕೇವಲ ಒಂದು ವರ್ಷ 26 ದಿನಗಳ ಕಾಲ ಸಚಿವರಾಗಿ ಅಧಿಕಾರದಲ್ಲಿದ್ದ ರಮೇಶ್ ಜಾರಕಿಹೊಳಿ ಈಗ ರಾಸಲೀಲೆ ಸಿಡಿ ಪ್ರಕರಣ ಸ್ಫೋಟಗೊಂಡ ಬೆನ್ನಲ್ಲೇ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಯುವತಿಯೊಬ್ಬಳ ಜೊತೆ ರಾಸಲೀಲೆಯಲ್ಲಿ ತೊಡಗಿರುವ ರಮೇಶ್ ಜಾರಕಿಹೊಳಿ ಸಿಡಿಯನ್ನು ನಾಗರಿಕ ಹಕ್ಕುಗಳ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದು, ಸಚಿವರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ದೂರು ನೀಡಿದ ಕೇವಲ 20 ಗಂಟೆಯಲ್ಲೇ ರಮೇಶ್ ಜಾರಕಿಹೊಳಿ ತಲೆದಂಡವಾಗಿದೆ. ಜಲಸಂಪನ್ಮೂಲ ಸಚಿವರಾಗಿ ಅಧಿಕಾರಕ್ಕೇರಿದ ಕೇವಲ 13 ತಿಂಗಳಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಸ್ಥಿತಿ ತಂದುಕೊಂಡಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ಸಿಎಂ ಯಡಿಯೂರಪ್ಪ ಅಂಗೀಕರಿಸಿದ್ದಾರೆ.
ಈ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಮುಂದಿನ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೆಲ ಷರತ್ತುಗಳನ್ನು ವಿಧಿಸಿ ತಮ್ಮ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜೀನಾಮೆ ಬಳಿಕ ರಮೇಶ್ ಜಾರಕಿಹೊಳಿ ಹಾಗೂ ಕೆ ಎಂಎಫ್ ಅಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಸಿಡಿ ಕರ್ಮಕಾಂಡದ ರಹಸ್ಯ ಬಯಲಾಗಲು ಕಾರಣವೇನು? ತಮ್ಮ ಮುಂದಿನ ನಡೆಯೇನು? ತನ್ನಿಂದ ತೆರವಾದ ಸಚಿವ ಸ್ಥಾನಕ್ಕೆ ಯಾರಿಗೆ ಶಿಫಾರಸು ಮಾಡಬಹುದು ಇತ್ಯಾದಿ ವಿಚರಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ರಮೇಶ್ ಅವರಿಂದ ತೆರವಾದ ಸಚಿವ ಸ್ಥಾನವನ್ನು ನೀಡುವ ಬಗ್ಗೆಯೂ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ