ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ 16 ಕ್ಷೇತ್ರಗಳ ಉಸ್ತುವಾರಿ ನೀಡುವಂತೆ ಹೈಕಮಾಂಡ್ ಬಳಿ ಕೇಳಿದ್ದಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ತಾವು ಸ್ಪರ್ಧಿಸಲಿರುವ ಗೋಕಾಕ ಮತ್ತು ಸಹೋದರ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸಲಿರುವ ಅರಬಾವಿ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ 16 ಕ್ಷೇತ್ರಗಳನ್ನು ಅವರು ಕೇಳಿದ್ದಾರೆ.
ಅಂದರೆ ಈ ಕ್ಷೇತ್ರಗಳ ಚುನಾವಣೆ ಉಸ್ತುವಾರಿಯನ್ನು ತಮಗೆ ವಹಿಸಿ, ಬಿ ಫಾರ್ಮನ್ನು ತಮ್ಮ ಕೈಗೆ ನೀಡುವಂತೆ ಅವರು ಕೇಳಿರುವುದು. ಆದರೆ ತಮ್ಮ ಬೇಡಿಕೆ ಬಗ್ಗೆ ಹೈಕಮಾಂಡ್ ಇನ್ನೂ ತಿಳಿಸಿಲ್ಲ. ಒಪ್ಪಿಗೆ ಕೊಟ್ಟ ತಕ್ಷಣ ಕೆಲಸ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಕ್ಷೇತ್ರಗಳನ್ನು ಗೆಲ್ಲಿಸುವುದಾಗಿಯೂ ಅವರು ಈಗಾಗಲೆ ಹೇಳಿದ್ದಾರೆ.
ಇಷ್ಟೆಲ್ಲದರ ನಡುವೆಯೂ ರಮೇಶ ಜಾರಕಿಹೊಳಿಗೆ ನಿಜವಾಗಿ ಬೆಳಗಾವಿ ಜಿಲ್ಲೆಯಲ್ಲಿ ಆಸಕ್ತಿ ಇರುವ ಕ್ಷೇತ್ರಗಳು ಯಾವುವು ಗೊತ್ತೆ? ಅವರು ಟಾರ್ಗೆಟ್ ಮಾಡಿರುವುದು 6+1 ಕ್ಷೇತ್ರ ಮಾತ್ರ. 6 ಕ್ಷೇತ್ರಗಳಲ್ಲಿ ತಾವು ಹೇಳಿದವರಿಗೂ ಟಿಕೆಟ್ ನೀಡಬೇಕು ಎನ್ನುವ ಪಟ್ಟನ್ನು ಹೈಕಮಾಂಡ್ ಬಳಿ ಇಟ್ಟಿದ್ದಾರೆ. ಇನ್ನೊಂದು ಕ್ಷೇತ್ರದ ಕುರಿತು ಹಠ ಹಿಡಿದಿಲ್ಲ.
ಅಷ್ಟಕ್ಕೂ ರಮೇಶ ಜಾರಕಿಹೊಳಿ ಕೇಳಿರುವ ಕ್ಷೇತ್ರಗಳು ಯಾವುವು ಎಂದರೆ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ನಿಪ್ಪಾಣಿ, ಕುಡಚಿ, ಅಥಣಿ, ಕಾಗವಾಡ. 7ನೇಯದು ಹುಕ್ಕೇರಿ. ಈ ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬರುವುದು ರಮೇಶ ಜಾರಕಿಹೊಳಿ ಅವರ ಗುರಿ. ಬೆಳಗಾವಿ ಗ್ರಾಮೀಣ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಶಾಸಕರಿದ್ದಾರೆ. ಆದಾಗ್ಯೂ 3 ಕಡೆ ಅಭ್ಯರ್ಥಿ ಬದಲಿಸಬೇಕೆಂದು ಅವರು ನಿರ್ಧರಿಸಿದ್ದಾರೆ.
ಬೆಳಗಾವಿ ದಕ್ಷಿಣಕ್ಕೆ ಹಾಲಿ ಶಾಸಕ ಅಭಯ ಪಾಟೀಲ ಬದಲು ಕಿರಣ ಜಾಧವ ಅವರಿಗೆ ಟಿಕೆಟ್ ಕೊಡಬೇಕು. ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಬದಲು ಉತ್ತಮ ಪಾಟೀಲ ಅವರಿಗೆ ಟಿಕೆಟ್ ಕೊಡಬೇಕು. ಕುಡಚಿಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದಲ್ಲಿ ಶಾಮ್ ಘಾಟಗೆಗೆ ಟಿಕೆಟ್ ಕೊಡಬೇಕು ಎನ್ನುವುದು ರಮೇಶ ಜಾರಕಿಹೊಳಿ ಯೋಚನೆ. ಇನ್ನು ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ ಮನ್ನೋಳಕರ್ ಅವರಿಗೆ, ಅಥಣಿಯಲ್ಲಿ ಮಹೇಶ ಕುಮಟಳ್ಳಿ ಅವರಿಗೆ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಅವರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹುಕ್ಕೇರಿಯಲ್ಲಿ ದಿ.ಉಮೇಶ ಕತ್ತಿಯವರ ಪುತ್ರ ನಿಖಿಲ್ ಕತ್ತಿಗೇ ಟಿಕೆಟ್ ಕೊಡಬೇಕು. ಕತ್ತಿಯ ಮಗ ನನ್ನ ಮಗ ಇದ್ದಹಾಗೆ. ಹಾಗಾಗಿ ಅಲ್ಲಿ ಬೇರೆಯಾರಿಗೂ ಟಿಕೆಟ್ ಕೊಡಬಾರದು. ನಾನು ಶೀಘ್ರವೇ ಹೋಗಿ ನಿಖಿಲ್ ಕತ್ತಿ ಭೇಟಿಯಾಗಿ ಬರುವೆ ಎಂದು ರಮೇಶ ಜಾರಕಿಹೊಳಿ ಈಗಾಗಲೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಇನ್ನು ಖಾನಾಪುರದಲ್ಲಿ ಲಕ್ಷ್ಮಣ ಸವದಿ ಬೆಂಬಲಿಗ, ಮಾಜಿ ಶಾಸಕ ಅರವಿಂದ ಪಾಟೀಲ ಅವರಿಗೆ ಟಿಕೆಟ್ ತಪ್ಪಿಸಲು ನಿರ್ಧರಿಸಿದ್ದಾರೆ.
ತಾವು ಕೇಳಿದ ಕ್ಷೇತ್ರಗಳಿಗೆ ತಾವು ಹೇಳಿದವರಿಗೆ ಟಿಕೆಟ್ ನೀಡದಿದ್ದಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಯೋಚನೆಯನ್ನೂ ಅವರು ಮಾಡಬಹುದು.
ಇದರ ಜೊತೆಗೆ ರಾಯಚೂರಿನ ಕೆಲವು ಕ್ಷೇತ್ರ ಮತ್ತು ಮೈಸೂರಿನ ಕೆಲವು ಕ್ಷೇತ್ರಗಳ ಉಸ್ತುವಾರಿಯನ್ನೂ ತಮಗೆ ನೀಡುವಂತೆ ರಮೇಶ ಜಾರಕಿಹೊಳಿ ಕೇರಿದ್ದಾರೆ.
ಈ ಎಲ್ಲ ಕ್ಷೇತ್ರ ಸೇರಿ ಮುಂಬರುವ ವಿಧಾನಸಭೆಯಲ್ಲಿ ಕನಿಷ್ಠ 15 -20 ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬಂದು ಕಿಂಗ್ ಮೇಕರ್ ಆಗಬೇಕೆನ್ನುವ ಯೋಚನೆಯಲ್ಲಿ ಅವರಿದ್ದಾರೆ ಎಂದು ಅವರ ಆಪ್ತವಲಯದ ಮೂಲಗಳು ತಿಳಿಸಿವೆ. ಮುಂಬರುವ ವಿಧಾನಸಭೆ ಮತ್ತು ಅತಂತ್ರವಾಗಲಿದೆ. ಹಾಗಾಗಿ ಒಂದಿಷ್ಟು ಕ್ಷೇತ್ರವನ್ನು ತಮ್ಮ ಕೈಯಲ್ಲ್ಲಿಟ್ಟುಕೊಳ್ಳಬೇಕು. ಆ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳುವ ಪ್ಲ್ಯಾನ್ ರಮೇಶ ಜಾರಕಿಹೊಳಿ ಅವರದ್ದು.
ಪ್ರಸ್ತುತ ವಿಧಾನಭೆಯಲ್ಲಿ ಎಷ್ಟೊಂದು ಹೋರಾಟ ಮಾಡಿದರೂ ಅದರ ಫಲ ಉಣ್ಣಲು ಸಾಧ್ಯವಾಗಲಿಲ್ಲ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಹಾಗಾಗದಂತೆ ಚುನಾವಣೆ ಪೂರ್ವವೇ ತಯಾರಿ ಮಾಡಿಕೊಳ್ಳಬೇಕು ಎನ್ನುವುದು ರಮೇಶ ಜಾರಕಿಹೊಳಿ ಪ್ಲ್ಯಾನ್.
ಭಾರತೀಯ ಜನತಾ ಪಾರ್ಟಿ ರಮೇಶ ಜಾರಕಿಹೊಳಿ ಬೇಡಿಕೆಗೆ ಒಪ್ಪಿಗೆ ನೀಡಲಿದೆಯೇ? ಅವರು ಕೇಳಿದಷ್ಟು ಕ್ಷೇತ್ರಗಳ ಬಿ ಫಾರ್ಮ್ ಅವರ ಕೈಗೆ ಕೊಡಲಿದೆಯೇ?
*ಶಿವಮೊಗ್ಗ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/shivamoggaairportinternational-airport/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ