ಪ್ರಗತಿವಾಹಿನಿ ಸುದ್ದಿ, ಅಥಣಿ – ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಶನಿವಾರ ಬೆಳಗ್ಗೆ ಆರ್ ಎಸ್ಎಸ್ ಪ್ರಭಾವಿ ನಾಯಕ ಅರವಿಂದರಾವ್ ದೇಶಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಅಥಣಿಯ ದೇಶಪಾಂಡೆ ಮನೆಗೆ ತೆರಳಿದ ಜಾರಕಿಹೊಳಿ, ಸಚಿವಸ್ಥಾನ ಮರಳಿ ಪಡೆಯುವ ದಿಸೆಯಲ್ಲಿ ಸಂಘ ಪರಿವಾರದ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಿದರೆಂದು ಗೊತ್ತಾಗಿದೆ. ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ನಾಗಪುರದ ಆರ್ ಎಸ್ಎಸ್ ಕಚೇರಿಗೂ ಅವರು ಭೇಟಿ ನೀಡಿದ್ದರು.
ಅರವಿಂದ ರಾವ್ ದೇಶಪಾಂಡೆ ಜೊತೆಗಿನ ಮಾತುಕತೆಯ ವಿವರ ನೀಡಲು ನಿರಾಕರಿಸಿದ ರಮೇಶ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡದೆ ತೆರಳಿದರು.
ನಿನ್ನೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸಧ್ಯದ ಪ್ರಭಾವಿ ಲಿಂಗಾಯತ ಸ್ವಾಮೀಜಿ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಜೊತೆಗೂ ಮಾತುಕತೆ ನಡೆಸಿದ್ದಾರೆ. ಇನ್ನು 8 -10 ದಿನದಲ್ಲಿ ತಾವು ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ಸಾಧ್ಯತೆಯನ್ನು ಅವರು ಬಹಿರಂಗ ಪಡಿಸಿದ್ದು, ತನ್ಮೂಲಕ ಮುಖ್ಯಮಂತ್ರಿಗಳಿಗೆ ಗಡುವು ನೀಡಿದ್ದಾರೆ.
ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿ ತಿಂಗಳೊಳಗೆ ಮರಳಿ ಸೇರ್ಪಡೆಯಾಗಬಹುತೆನ್ನುವ ಅವರ ನಿರೀಕ್ಷೆ ಹುಸಿಯಾಗಿದ್ದು, ಈಗಾಗಲೆ 4 ತಿಂಗಳು ಕಳೆದಿದೆ.
ಈಗ ಪದ್ಮಶ್ರೀ ಇಂದಿರಾ ಜೈಸಿಂಗ್ ಸಿಡಿ ಯುವತಿಯ ಪರವಾಗಿ ಪ್ರಕರಣದ ವಕಾಲತ್ತು ವಹಿಸಿರುವುದು ಮತ್ತಷ್ಟು ಇಕ್ಕಿಟ್ಟಿಗೆ ಸಿಲುಕುವಂತೆ ಮಾಡಿದೆ. ಪ್ರಕರಣ ಸಧ್ಯಕ್ಕೆ ಮುಕ್ತಾಯವಾಗುವ ಲಕ್ಷಣ ಕಾಣಿಸುತ್ತಿಲ್ಲ.
ತಾವು ಸಚಿವಸ್ಥಾನಕ್ಕಾಗಿ ಪ್ರಯತ್ನ ನಡೆಸಿರುವ ವದಂತಿಯನ್ನು ತಳ್ಳಿ ಹಾಕಿರುವ ರಮೇಶ ಜಾರಕಿಹೊಳಿ, ಸರಕಾರವನ್ನೇ ತಂದಿರುವ, ಇನ್ನೊಬ್ಬರಿಗೆ ಮಂತ್ರಿ ಸ್ಥಾನ ಕೊಡಿಸುವ ತಾಕತ್ತು ಇರುವ ನಾನು ಮಂತ್ರಿಸ್ಥಾನಕ್ಕಾಗಿ ಲಾಬಿ ನಡೆಸುತ್ತೇನಾ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ರಮೇಶ ಜಾರಕಿಹೊಳಿ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಮತ್ತೆ ಮುಂಬೈಗೆ ಭೇಟಿ ನೀಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಮುಂಬೈಯಲ್ಲೇ ತೀರ್ಮಾನ, ಮುಂಬೈಯಲ್ಲೇ ಮಾತು ಎಂದ ರಮೇಶ್ ಜಾರಕಿಹೊಳಿ
ರಾಜಿನಾಮೆ, ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸಿದ್ದು ನಿಜ; ರಮೇಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ