ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಂತರ ರಾಜ್ಯ ಜಲ ವಿವಾದಗಳಾದ ಕೃಷ್ಣಾ, ಕಾವೇರಿ, ಮಹದಾಯಿ ನೀರಾವರಿ ಯೋಜನೆಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳ ಮುಂದೆ ಇತ್ಯರ್ಥವಾಗಬೇಕಾಗಿರುವ ದಾವೆಗಳ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕಾನೂನು ಮತ್ತು ತಾಂತ್ರಿಕ ತಂಡದೊಂದಿಗೆ ನವದೆಹಲಿಯಲ್ಲಿ ಪರಾಮರ್ಶೆ ನಡೆಸಿದರು.
ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ಪ್ರಕಟಣೆ ಕುರಿತಂತೆ ರಾಜ್ಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮಧ್ಯಕಾಲೀನ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು, ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠದಲ್ಲಿ ತಮಿಳುನಾಡು ರೈತರು ಸಲ್ಲಿಸಿರುವ ಪಿಐಎಲ್ ಕುರಿತು ರಾಜ್ಯವು ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಹಾಗೂ ಮಹದಾಯಿ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಕಣಿವೆ ರಾಜ್ಯಗಳು ಸಲ್ಲಿಸಿರುವ ಎಸ್.ಎಲ್.ಪಿ.ಗಳ ವಿಚಾರಣೆಯು ಬರುವ ಸಾಧ್ಯತೆ ಇದ್ದು, ಈ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು.
ತಮಿಳುನಾಡು ಸರ್ಕಾರವು ಕಾವೇರಿ ಕಣಿವೆಯಲ್ಲಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜಿಸಿರುವ ನದಿ ಜೋಡಣೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಮತ್ತು ರಾಜ್ಯದ ಹಿತಾಸಕ್ತಿಗಳ ಮೇಲೆ ಆಗುವ ಪರಿಣಾಮಗಳ ಕುರಿತು ಚರ್ಚಿಸಲಾಯಿತು.
ಹೆಚ್ಚುವರಿ ನೀರನ್ನು ಏಕಪಕ್ಷೀಯವಾಗಿ ತಮಿಳುನಾಡು ರಾಜ್ಯವು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದ್ದು, ತಮಿಳುನಾಡು ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ನೀರನ್ನು ರಾಜ್ಯವು ಪೂರೈಸಿದ ನಂತರ ಕರ್ನಾಟಕದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ನೀರನ್ನು ಕರ್ನಾಟಕವೇ ಬಳಸಿಕೊಳ್ಳುವುದು ರಾಜ್ಯದ ಹಕ್ಕಾಗಿದೆಯೆಂಬುದು ರಾಜ್ಯದ ನಿಲುವಾಗಿರುತ್ತದೆ. ಈ ಯೋಜನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಈ ಕುರಿತು ರಾಜ್ಯವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಎಲ್ಲಾ ಪಕ್ಷಗಳ ಸಭಾ ನಾಯಕರೊಂದಿಗೆ ಸಮಾಲೋಚಿಸಿ, ರಾಜ್ಯದ ಹಿತಾಸಕ್ತಿ ಕಾಪಾಡಲು ರಾಜ್ಯವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ