ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿದ ಬೆನ್ನಲ್ಲೇ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್ ಮಹತ್ವದ ಸಭೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಅಥಣಿಯಲ್ಲಿ ಉಭಯ ನಾಯಕರು ಸಭೆ ನಡೆಸಿದ್ದು, ಸಭೆ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ, ಮಂತ್ರಿ ಸ್ಥಾನಕ್ಕಿಂತ ಕ್ಷೇತ್ರ ಅಭಿವೃದ್ಧಿಯಾಗಬೇಕು. ಕ್ಷೇತ್ರಕ್ಕೆ ನೀರಾವರಿ ಯೋಜನೆ ಜಾರಿಯಾಗಬೇಕು ಎಂದು ಪಾಟೀಲರು ಹೇಳಿದ್ದಾರೆ. ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷ ಹಾಗೂ ವರಿಷ್ಠರಿಗೆ ಬಿಟ್ಟದ್ದು, ನಾನು ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದರು.
ಈ ಬಾರಿ ಸಂಪುಟದಲ್ಲಿ ಮರಾಠ ಸಮುದಾಯಕ್ಕೆ ಸಚಿವ ಸ್ಥಾನ ಸಿಗಬೇಕು. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿಯೂ ಮಾತನಾಡಿದ್ದೇನೆ. ಹಾಗಾಗಿ ಅತಿ ಶೀಘ್ರದಲ್ಲಿ ಒಂದೊಳ್ಳೆ ಸುದ್ದಿ ಬರಲಿದೆ ಎಂಬ ವಿಶ್ವಾಸವಿದೆ ಎಂದರು.
2023ರ ವಿಧಾನಸಭೆ ಚುನಾವಣೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬದಲಾವಣೆಯ ಗಾಳಿ ಇಲ್ಲ ಎಂದು ಜಾರಕಿಹೊಳಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮೊಂದಿಗೆ ಮಾಜಿ ಸಚಿವರು, ಶಾಸಕರು ಶ್ರೀಮಂತ್ ಪಾಟೀಲ್ ಅವರಿಗೂ ಮೌಲ್ಯದ ಪಾಲು ಇದೆ. ಸಂಪುಟ ಸೇರುವ ಸುದ್ದಿಯನ್ನು ಖಚಿತ ಪಡಿಸಿದ ಅವರು, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರಲಿದೆ ಎಂದರು.
ಪಿಎಸ್ ಐ ನೇಮಕಾತಿ ಹಗರಣದ ಕುರಿತು ಕೇಳಿದ ಪ್ರಶ್ನೆಗೆ, ‘ಪ್ರತಿಪಕ್ಷಗಳ ಬಳಿ ಲಿಖಿತ ಸಾಕ್ಷ್ಯವಿದ್ದರೆ ಸಲ್ಲಿಸಲಿ, ಯಾವುದೇ ವ್ಯಕ್ತಿ ದೊಡ್ಡವರಾಗಿದ್ದರೆ ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದರು. ಗೋಕಾಕದಲ್ಲಿ ಅಹಿಂದ್‌ಗೆ ಶೀಘ್ರ ಸೇರ್ಪಡೆಯಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇವರ ಜೊತೆ ಚರ್ಚೆ ಮಾಡಿ ಶೀಘ್ರವೇ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ನನಗೆ ಸಚಿವ ಸ್ಥಾನಕ್ಕಿಂತ ನೀರಿನ ಯೋಜನೆ ಮುಖ್ಯವಾಗಿದೆ. ನಮ್ಮ ಕ್ಷೇತ್ರದ ನೀರಿನ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಪಡೆಯುವತ್ತ ನನ್ನ ಗಮನವಿದೆ. ಖಿಳೇಗಾಂವ ಬಸವೇಶ್ವರ ನೀರಿನ ಯೋಜನೆ ಪೂರ್ಣಗೊಳಿಸಿ ಈ ಭಾಗದ ಬರಪೀಡಿತ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಕನಸಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಎಂಎಫ್ ನ ಅಪ್ಪಾಸಾಹೇಬ ಅವತಾಡೆ, ಶೀತಲ್ ಪಾಟೀಲ್, ನಾನಾಸಾಹೇಬ ಅವತಾಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೇ 9ರಿಂದ ರಾಜ್ಯಾದ್ಯಂತ ಮೊಳಗಲಿದೆ ಓಂಕಾರ ನಾಮ ಸ್ಮರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ