ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಬರೆದುಕೊಟ್ಟ ದೂರನ್ನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತೇನೆ. ಯುವತಿ ಆರೋಪಿಸುತ್ತಿರುವುದು ರಾಜ್ಯದ ಪ್ರಭಾವಶಾಲಿ ವ್ಯಕ್ತಿ ವಿರುದ್ಧ. ಹಾಗಾಗಿ ಭದ್ರತೆ ಕಾರಣಕ್ಕೆ ನಮ್ಮ ಮುಖಾಂತರ ದೂರು ಕೊಡಿಸುತ್ತಿದ್ದಾರೆ ಎಂದು ಸಿಡಿ ಲೇಡಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಜಗದೀಶ್, ದೂರಿನ ಪ್ರತಿಯನ್ನು ನಾನು ಬೆಂಗಳೂರು ಪೊಲೀಸ್ ಕಮೀಷ್ನರ್ ಅವರಿಗೆ ಮಧ್ಯಾಹ್ನ 2:30ಕ್ಕೆ ನೀಡುತ್ತೇನೆ. ನಾನು ದೂರು ನೀಡುತ್ತಿಲ್ಲ. ಆದರೆ ಯುವತಿಯೇ ಸ್ವತ: ದೂರನ್ನು ಬರೆದು ಕಳುಹಿಸಿದ್ದಾಳೆ. ಆ ದೂರನ್ನು ನಾನು ಆಯುಕ್ತರಿಗೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೆಲ ದಿನಗಳಿಂದ ವಿಡಿಯೋ ಹರಿದಾಡುತ್ತಿರುವುದರಿಂದ ನಾನು ಫೇಸ್ ಬುಕ್ ಮುಖಾಂತರ ಮನವಿ ಮಾಡಿದ್ದೆ. ಯುವತಿಗೆ ಕಾನೂನು ಬೆಂಬಲ ನೀಡುವುದಾಗಿ, ಸಹಾಯ ಮಾಡುವುದಾಗಿ ಹೇಳಿದ್ದೆವು. ಧೈರ್ಯವಾಗಿ ಹೊರಬಂದು ದೂರು ದಾಖಲಿಸುವಂತೆ ತಿಳಿಸಿದ್ದೆವು. ನಮ್ಮನ್ನು ನಂಬಿ ಆಕೆ ಇಂದು ದೂರು ನೀಡುತ್ತಿದ್ದಾಳೆ. ನಾನೂ ಸೇರಿ 8 ವಕೀಲರಿಂದ ಸಹಾಯ ಮಾಡುತ್ತಿದ್ದೇವೆ. ಸಿಡಿ ಯಲ್ಲಿರುವ ಯುವತಿ ಸಾಮಾನ್ಯ ಮಹಿಳೆ. ಆಕೆ ಬಳಿ ಸಾಕ್ಷ್ಯಗಳು ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಯುವತಿ ಧೈರ್ಯವಾಗಿ ಬಂದು ಪೊಲೀಸರ ಎದುರು ಹೇಳಿಕೆ ನೀಡಲು ಸಹಾಯ ಮಾಡುತ್ತಿದ್ದೇವೆ ಅಷ್ಟೇ ಎಂದರು.
ಆಕೆ ಭಯದಿಂದ ಬೇರೆಲ್ಲೋ ಬದುಕುತ್ತಿದ್ದಾಳೆ. ಆಕೆ ಮನವಿಯಂತೆ ಆಕೆಯ ತಂದೆ-ತಾಯಿಗೆ ಪೊಲೀಸರು ರಕ್ಷಣೆ ನೀಡಲಿ. ಯುವತಿ ಕೂಡ ಒಂದೆರಡು ದಿನದಲ್ಲಿ ಹೊರಬರಬಹುದು. ಒಂದು ವೇಳೆ ಈ ಕೇಸ್ ನಲ್ಲಿ ಹನಿಟ್ರ್ಯಾಪ್ ಆಗಿದ್ದರೂ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಇಲ್ಲವೇ ಯುವತಿಗೆ ವಂಚಸಿದ್ದರೆ ಆಕೆಗೆ ನ್ಯಾಯಸಿಗಲಿ. ರಮೇಶ್ ಜಾರಕಿಹೊಳಿ ಎಷ್ಟೇ ಪ್ರಭಾವಿಗಳಾಗಿರಲಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಒಟ್ಟಾರೆ ಸತ್ಯಾಂಶ ತನಿಖೆ ಮೂಲಕ ಹೊರಬರಲಿ ಎಂಬುದೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ.
ಯುವತಿ ದೂರು ಕೊಡಲಿ; ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದ ರಮೇಶ್ ಜಾರಕಿಹೊಳಿ
ರಮೇಶ ಜಾರಕಿಹೊಳಿ ವಿರುದ್ಧ ಇಂದೇ ದೂರು: ಸಿಡಿ ಲೇಡಿ ಮತ್ತೊಂದು ವಿಡೀಯೋ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ