ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಪಡೆದ ಸಾಲ ಮರುಪಾವತಿ ಮಾಡದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ಪ್ರಶ್ನಿಸಿ ರಮೇಶ್ ಜಾರಕಿಹೊಳಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ಜಾರಕಿಹೊಳಿ ಪರ ವಕೀಲರು, ಫೆ.26ರಂದು ಅರ್ಜಿದಾರರ ಮಗನ ಮದುವೆ ನಿಶ್ಚಯವಾಗಿದ್ದು. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಕೋರಿದ್ದಾರೆ.
ಈ ಅಂಶ ದಾಖಲಿಸಿಕೊಂಡಿರುವ ಹೈಕೋರ್ಟ್ ನ್ಯಾಯಪೀಠ. ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಮಗನ ಮದುವೆಯಲ್ಲಿ ತಂದೆಯ ಹಾಜರಿ ಮುಖ್ಯ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆವರೆಗೂ ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಇನ್ನು ಪ್ರಕರಣದ ಇತರ ಅರ್ಜಿದಾರರ ವಿರುದ್ಧ ತನಿಖೆಗೆ ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದೆ.
ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ತಮ್ಮ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅಭಿವೃದ್ಧಿಗೆಂದು ರಾಜ್ಯ ಸಹಕಾರ ಅಫೆಕ್ಸ್ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಆದರೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ರಮೇಶ್ ಜಾರಕಿಹೊಳಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ