*ಈಶ್ವರಪ್ಪ ಮನೆಯಲ್ಲಿ ನಡೆದ ರಹಸ್ಯ ಸಭೆಯ ಮಾಹಿತಿ ಬಹಿರಂಗ ಪಡಿಸಿದ ರಮೇಶ್ ಜಾರಕಿಹೊಳಿ*
ರಾಜುಗೌಡ ವಿರುದ್ಧ ಕಿಡಿ ಕಾರಿದ ಮಾಜಿ ಸಚಿವ
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ಚರ್ಚೆಯಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಗೊತ್ತಾದರೆ ರಾಜುಗೌಡಗೆ ಅವನೇ ಹೊಡೆಯುತ್ತಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಮನೆಯಲ್ಲಿ ರಾಜುಗೌಡ ಒಳಗೆ ಇದ್ದಾನೆ ಎಂದಿದ್ದರೆ ನಾನು ಒಳಗಡೆ ಹೊಗುತ್ತಿರಲಿಲ್ಲ. ಒಳಗಡೆ ಚರ್ಚೆಯಾಗಿದ್ದನ್ನು ಬಹಿರಂಗಪಡಿಸಿದರೆ ರಾಜುಗೌಡಗೆ ವಿಜಯೇಂದ್ರನೇ ಹೊಡೆಯುತ್ತಾನೆ ಎಂದರು.
ಈಶ್ವರಪ್ಪ ಅವರ ಮನೆಯಲ್ಲಿ ಮೀಸಲಾತಿ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಚರ್ಚೆ ಮಾಡುತ್ತಿದ್ದರು. ಇದು ಸೌಹಾರ್ದತೆಯ ಸಭೆ. ಆದರೆ ರಾಜುಗೌಡ ಮಾಧ್ಯಮದ ಮುಂದೆ ಬೇರೆ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.
ಈಶ್ವರಪ್ಪ ಅವರನ್ನು ಬಿಜೆಪಿಗೆ ಕರೆದುಕೊಂಡು ಬರುವ ಕೆಲಸ ನನ್ನದಲ್ಲ. ರಾಷ್ಟ್ರೀಯ ನಾಯಕರು ಅವರನ್ನ ಉಚ್ಛಾಟನೆ ಮಾಡಿದ್ದಾರೆ ಅವರೇ ನಿರ್ಣಯ ಮಾಡಬೇಕು ಎಂದರು.
ರಾಯಣ್ಣ, ಚನ್ನಮ್ಮ ಬ್ರಿಗೇಡ್ ಮಾಡುತ್ತಿರುವ ವಿಷಯದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅದ್ಯಾವುದು ಚರ್ಚೆ ಮಾಡಿಲ್ಲ. ಬಿಜೆಪಿ ಪಕ್ಷವನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಸಭೆ ನಡೆಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಡುವ ಹಕ್ಕಿದೆ. ದಯಮಾಡಿ ನಮಗೆ ಭಿನ್ನಮತೀಯ ಎನ್ನುವ ಟ್ಯಾಗ್ ತೆಗೆಯಿರಿ ಎಂದರು.
ಈಶ್ವರಪ್ಪ ಇವತ್ತಿಗೂ ಹಿಂದುಳಿದ ನಾಯಕ. ಈಶ್ವರಪ್ಪ ಅವರ ಬಗ್ಗೆ ಇವತ್ತು ಗೌರವ ಇದೆ. ನಾವು ಅವರ ಮನೆಗೆ ಹೋಗಿದ್ದು ರಾಜಕೀಯ ಮಾಡಿದ್ದು ನೋವಾಗಿದೆ. ನಾವು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲಿ ಇರುತ್ತೇವೆ. ಆದರೆ ರಾಜುಗೌಡ ಯಡಿಯೂರಪ್ಪ ಶಿಷ್ಯ ಅಂತಾ ಗುರುತಿಸಿಕೊಂಡಿದ್ದಾನೆ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ