ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಚಿವ ಸ್ಥಾನಕ್ಕಾಗಿ ಭಾರಿ ಕಸರತ್ತು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಚಿವನಾಗುವ ಯಾವುದೇ ಆಸೆಯಿಲ್ಲ, ನಾನು ಮಂತ್ರಿ ಸ್ಥಾನಕ್ಕಿಂತ ಮೇಲಿದ್ದೇನೆ ಎಂದು ಹೇಳಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನನಗೆ ಸ್ಥಾನ ಸಿಗಲಿ, ಸಿಗದೇ ಇರಲಿ, ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿ ಇದೆ. ಇಲ್ಲವಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಬಿಡುತ್ತಿತ್ತು ಈಗ ಸಂತೋಷವಾಗಿದ್ದೇನೆ ಎಂದಿದ್ದಾರೆ.
ಸಚಿವರಾಗಬೇಕು ಎಂಬ ಆಸೆ ಜಾರಕಿಹೊಳಿ ಕುಟುಂಬಕ್ಕೆ ಇಲ್ಲ. ಸರ್ಕಾರದಲ್ಲಿ ನಾವು ಸಚಿವರಾಗ್ತಿವೋ ಬಿಡ್ತಿವೋ ಆದರೆ ನಾನಿಗಲೂ ಮಂತ್ರಿಗಿಂತ ಹೆಚ್ಚಿದ್ದೇನೆ ಎಂದು ಹೇಳಿದರು.
ಶಾಸಕ ಸ್ಥಾನದಿಂದ ರಾಜೀನಾಮೆ ನೀರ್ಧಾರದಿಂದ ಹಿಂದೆ ಸರಿದಿದ್ದೇನೆ. ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ಆದರೆ ಸುತ್ತೂರು ಶ್ರೀಗಳು ಕೆಲ ಸಲಹೆ ಸೂಚನೆ ನೀಡಿದರು. ಹಾಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದೆ. ಕಾಂಗ್ರೆಸ್ ನವರು 20 ವರ್ಷ ನಡೆಸಿಕೊಂಡಷ್ಟು, ಬಿಜೆಪಿ ಹೈಕಮಾಂಡ್ 1 ವರ್ಷದಲ್ಲಿ ನಮ್ಮನ್ನು ನಡೆಸಿಕೊಂಡಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಬಿಜೆಪಿಯಲ್ಲಿ ಮುಂದುವರೆದಿದ್ದೇನೆ ಎಂದರು.
ಇದೇ ವೇಳೆ ಸಿಡಿ ಕೇಸ್ ಬಗ್ಗೆಯೂ ಮಾತನಾಡಿದ ಜಾರಕಿಹೊಳಿ, ಪ್ರಕರಣವನ್ನು ಇನ್ನೂ ಒಂದು ವರ್ಷ ಬೇಕಾದರೂ ಹಾಗೇ ಇಟ್ಟಿರಲಿ. ನನಗೇನೂ ಅವಸರವಿಲ್ಲ. ನನ್ನ ತಮ್ಮ ಇದ್ದಾನೆ, ಮಹೇಶ್ ಕುಮಟಳ್ಳಿ ಇದ್ದಾರೆ. ನಾನೇ ಸಚಿವನಾಗಬೇಕು ಎಂಬ ಆಸೆ ನನಗಿಲ್ಲ, ಈ ಅವಧಿಯಲ್ಲಿ ಸಚಿವರಾಗದಿದ್ದರೂ ಪರವಾಗಿಲ್ಲ. ಸಿದಿ ಕೇಸ್ ಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಚರ್ಚೆ ಮಾಡಲ್ಲ ಎಂದು ಹೇಳಿದರು.
ನನಗೆ ಈಗ ಮಂತ್ರಿ ಗಿಂತ್ರಿ ಆಗಬೇಕೆಂದಿಲ್ಲ. ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ. ಆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತರುವುದೇ ನಮ್ಮ ಏಕೈಕ ಗುರಿ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
ಉದ್ಯೋಗ ಮೇಳ: ವಿವಿಧ ಕಂಪನಿಗಳಿಗೆ 382 ಅಭ್ಯರ್ಥಿಗಳ ಆಯ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ