Cancer Hospital 2
Bottom Add. 3

*ರಾಮೇಶ್ವರದಲ್ಲಿ ಕಾಶೀ ಜಗದ್ಗುರು ಪೀಠದ ಶಾಖಾಮಠ ಸ್ಥಾಪನೆ*

ನ.19 ರಂದು ನೂತನ ಕಟ್ಟಡದ ಭೂಮಿಪೂಜೆ : ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗುರುಗಳ ಸಾನಿಧ್ಯ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ಜ್ಞಾನ ಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠದ ಶಾಖೆಯನ್ನು ರಾಷ್ಟ್ರದ ಸಮಸ್ತ ಭಕ್ತಗಣದ ಒತ್ತಾಸೆಯಂತೆ ತಮಿಳುನಾಡಿನ ಜ್ಯೋತಿರ್ಲಿಂಗದ ಕ್ಷೇತ್ರವಾದ ರಾಮೇಶ್ವರದಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾಶೀ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.

ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಕಾಶಿಗೆ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ರಾಮೇಶ್ವರಕ್ಕೆ ಹೋಗಿ ಅಲ್ಲಿಯ ಜ್ಯೋತಿರ್ಲಿಂಗ ದರ್ಶನ ಪಡೆದು ಬರಬೇಕೆಂಬ ಪ್ರತೀತಿ ಇದ್ದು, ಹಾಗೆ ಯಾತ್ರೆ ಕೈಗೊಳ್ಳುವ ಸಹಸ್ರಾರು ಭಕ್ತರ ಅನುಕೂಲಕ್ಕಾಗಿ ರಾಮೇಶ್ವರದಲ್ಲಿ ಕಾಶಿ ಜಗದ್ಗುರು ಪೀಠದ ಶಾಖೆಯನ್ನು ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ.

ಈಗಾಗಲೇ ಉತ್ತರ ಭಾರತದ ಹಲವು ಕ್ಷೇತ್ರಗಳಲ್ಲಿ ಕಾಶಿ ಜಗದ್ಗುರು ಪೀಠದ ಶಾಖೆಗಳಿದ್ದು, ಯಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಂತೆಯೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾಶಿ ಪೀಠದ ನೂರಾರು ಶಾಖಾಮಠಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಕಾಶಿ ಪೀಠವೇ ಸ್ವತಂತ್ರವಾಗಿ ರಾಮೇಶ್ವರದಲ್ಲಿ ತನ್ನ ಶಾಖೆಯನ್ನು ಸ್ಥಾಪಿಸಿ ಯಾತ್ರೆಗೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸಲು ಯೋಜಿಸಿದೆ.

ಭೂಮಿಪೂಜೆ : ಕಾಶಿ ಜಗದ್ಗುರು ಪೀಠದ ರಾಮೇಶ್ವರ ಶಾಖೆಯ ನೂತನ ಕಟ್ಟಡದ ಭೂಮಿಪೂಜೆಯು ಶ್ರೀಉಜ್ಜಯಿನಿ, ಶ್ರೀಶ್ರೀಶೈಲ ಹಾಗೂ ಶ್ರೀಕಾಶಿ ಪೀಠದ ಉಭಯ ಜಗದ್ಗುರುಗಳ ಪವಿತ್ರ ಸಾನ್ನಿಧ್ಯದಲ್ಲಿ ನವ್ಹೆಂಬರ್-19 ರಂದು (ರವಿವಾರ) ಮುಂಜಾನೆ 11-30ಕ್ಕೆ ನೆರವೇರಲಿದೆ. ನಂತರ ಎಲ್ಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಾಮೇಶ್ವರದ ರಾಷ್ಟ್ರೀಯ ಹೆದ್ದಾರಿ ಟೋಲ್ ಸಮೀಪದ ಶ್ರೀನಿವಾಸ ಮಹಲ್‌ನಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ. ತಮಿಳುನಾಡಿನ ಪ್ರತಿಷ್ಠಿತ ತಿರುವಣ್ಣಾಮಲೈ ಮಠದ ಶಿವಶ್ರೀ ವೀರಶಿವತಿರುಗುಗೈ ನಮಃಶಿವಾಯ ಸ್ವಾಮಿಗಳು ಮತ್ತು ಪುದುಚೇರಿಯ ಅಧೀನಂ ಮಠದ ಶಿವಜ್ಞಾನ ಬಾಲಯ ಸ್ವಾಮಿಗಳೂ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ ತೆಲಂಗಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳ ಅನೇಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವವಹಿಸುವರು. ಸೊಲ್ಲಾಪುರದ ಸಂಸದರಾದ ಶ್ರೀಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆವಹಿಸುವರು. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್, ಕರ್ನಾಟಕದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿಮಠ, ಕನ್ಯಾಕುಮಾರಿಯ ಸಂಸದ ವಿಜಯ ವಸಂತ್, ಕೊಯಮತ್ತೂರು ಶಾಸಕ ವನತಿ ಶ್ರೀನಿವಾಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ದ್ವಾದಶ ವರ್ಧಂತಿ ಮಹೋತ್ಸವವೂ ಜರುಗಲಿದೆ.

ನವ್ಹೆಂ.18 ರಂದು ರಾಮೇಶ್ವರದ ಐತಿಹಾಸಿಕ ಧನುಷ್ಕೋಟಿಯಲ್ಲಿ ಎಲ್ಲ ಪೀಠಗಳ ಜಗದ್ಗುರುಗಳು ಹಾಗೂ ಶ್ರೀಗಳು ಸಮುದ್ರದಲ್ಲಿ ಮತ್ತು 21 ತೀರ್ಥಭಾವಿಗಳ ಜಲದಲ್ಲಿ ಮಂಗಲಸ್ನಾನ ಮಾಡಿ ರಾಮೇಶ್ವರ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮವಿದೆ ಎಂದು ಕಾಶಿ ಜಗದ್ಗುರುಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bottom Add3
Bottom Ad 2

You cannot copy content of this page