Wanted Tailor2
Cancer Hospital 2
Bottom Add. 3

ಏಕದಿನ ವಿಶ್ವಕಪ್‌ನಲ್ಲಿ 4ನೇ ಬಾರಿ ಪ್ರಶಸ್ತಿ ಸುತ್ತಿಗೇರಿದ ಟೀಮ್ ಇಂಡಿಯಾ 

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಲಿಷ್ಠ ನಿರ್ವಹಣೆ ತೋರಿದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 70 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಇಂಗ್ಲೆಂಡ್ನಲ್ಲಿ ನಡೆದ 2019ರ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಸೆಮೀಸ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡ ಭಾರತ, ಪ್ರಸಕ್ತ ಟೂರ್ನಿಯಲ್ಲಿ ದಾಖಲೆಯ ಸತತ 10ನೇ ಜಯ ಗಳಿಸಿತು. ಇದರೊಂದಿಗೆ ಭಾರತ 3ನೇ ಬಾರಿಗೆ ಪ್ರಶಸ್ತಿ ಗೆಲುವಿನತ್ತ ದಾಪುಗಾಲಿಟ್ಟಿತು. ಇದಕ್ಕೂ ಮೊದಲು ಭಾರತ ತಂಡ 1983, 2003 ಹಾಗೂ 2011ರಲ್ಲಿ ಫೈನಲ್ ಪ್ರವೇಶಿಸಿತ್ತು.  

ಟಾಸ್ ಜಯಿಸಿದ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ (117ರನ್, 113 ಎಸೆತ, 9ಬೌಂಡರಿ, 2 ಸಿಕ್ಸರ್) ಹಾಗೂ ಶ್ರೇಯಸ್ ಅಯ್ಯರ್ (105ರನ್, 70 ಎಸೆತ, 4 ಬೌಂಡರಿ, 8 ಸಿಕ್ಸರ್) ಜೋಡಿಯ ಶತಕದಾಟದ ನೆರವಿನಿಂದ ಭಾರತ ತಂಡ 4 ವಿಕೆಟ್‌ಗೆ 397 ರನ್‌ಗಳಿಸಿತು. ಬಳಿಕ ಈ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಡೆರಿಯಲ್ ಮಿಚೆಲ್ (134 ರನ್, 118 ಎಸೆತ, 9 ಬೌಂಡರಿ, 7 ಸಿಕ್ಸರ್) ಶತಕದಾಟದ ನಡುವೆಯೂ ಮೊಹಮದ್ ಶಮಿ (57ಕ್ಕೆ7) ಮಾರಕ ದಾಳಿಗೆ ನಲುಗಿ 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ಸರ್ವಪತನ ಕಂಡಿತು.  

* *ವಿರಾಟ್ ಕೊಹ್ಲಿ 50ನೇ ಶತಕದಾಟ* 

ರೋಹಿತ್ ಶರ್ಮ (47ರನ್, 29 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಶುಭಮಾನ್ ಗಿಲ್ (80*ರನ್, 66 ಎಸೆತ, 8 ಬೌಂಡರಿ, 3 ಸಿಕ್ಸರ್) ಉತ್ತಮ ಆರಂಭ ನೀಡಿದರು. ರೋಹಿತ್ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ ಕಿವೀಸ್ ಬೌಲರ್‌ಗಳನ್ನು ಬೆಂಡಾಡಿದರು. ವಾಂಖೆಡೆ ಮೈದಾನದಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ಎದುರು ತಮ್ಮ 50ನೇ ಏಕದಿನ ಶತಕ ಸಿಡಿಸಿದರು. ಈ ಮೂಲಕ ದಿಗ್ಗಜ ಸಚಿನ್ ದಾಖಲೆಯನ್ನು ಹಿಂದಿಕ್ಕಿದ ಕೊಹ್ಲಿ ವಿಶ್ವದಾಖಲೆ ಬರೆಯುವ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಮತ್ತೊಂದು ತುದಿಯಲ್ಲಿ ಶುಭಮಾನ್ ಗಿಲ್‌ರಿಂದ ಸಾಥ್ ಗಿಟ್ಟಿಸಿಕೊಂಡರು. ಗಿಲ್ ಗಾಯದ ಸಮಸ್ಯೆಯಿಂದ ಕಣದಿಂದ ನಿವೃತ್ತಿ ಹೊಂದಿದರೆ, ಬಳಿಕ ಜೊತೆಯಾದ ಸ್ಥಳೀಯ ಪ್ರತಿಭೆ ಶ್ರೇಯಸ್ ಅಯ್ಯರ್ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊಹ್ಲಿ ನಿರ್ಗಮನದ ಬಳಿಕ ಶ್ರೇಯಸ್ ಜೊತೆಯಾದ ಕನ್ನಡಿಗ ಕೆಎಲ್ ರಾಹುಲ್ (39*ರನ್, 20 ಎಸೆತ, 5 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತವನ್ನು 400ರ ರನ್‌ಗಡಿ ಹತ್ತಿರ ಕೊಂಡೊಯ್ದರು. 

* *ಶಮಿ ಮಾರಕ ದಾಳಿ* 

ಟೀಮ್ ಇಂಡಿಯಾ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲೇ ಮೊಹಮದ್ ಶಮಿ ಆರಂಭಿಕ ಆಘಾತ ನೀಡಿದರು. ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ (69 ರನ್, 73 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಡೆರಿಯಲ್ ಮಿಚೆಲ್ ಜೋಡಿ ಕೊಂಚ ಪ್ರತಿಹೋರಾಟ ನಡೆಸಿತು. ಈ ಜೋಡಿ 3ನೇ ವಿಕೆಟ್‌ಗೆ 181 ರನ್ ಜೊತೆಯಾಟವಾಡಿತು. ವಿಲಿಯಮ್ಸನ್ ವಿಕೆಟ್ ಕಬಳಿಸಿದ ಶಮಿ ಭಾರತದ ಪಾಳಯದಲ್ಲಿ ಸಂಭ್ರಮ ಹೆಚ್ಚಿಸಿದರು. ಕಿವೀಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದ ಶಮಿ ಭಾರತಕ್ಕೆ ಗೆಲುವು ಖಚಿತ ಪಡಿಸಿದರು. ಅಸಾಧ್ಯ  ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು.

ಸಂಕ್ಷೀಪ್ತ ಸ್ಕೋರ್

 *ಭಾರತ: 4 ವಿಕೆಟ್‌ಗೆ 397* (ರೋಹಿತ್ 47, ಶುಭಮಾನ್ ಗಿಲ್ 80*, ವಿರಾಟ್ ಕೊಹ್ಲಿ 117, ಶ್ರೇಯಸ್ ಅಯ್ಯರ್ 105, ರಾಹುಲ್ 39*, ಟೀಮ್ ಸೌಥಿ 100ಕ್ಕೆ 3), *ನ್ಯೂಜಿಲೆಂಡ್: 48.5 ಓವರ್‌ಗಳಲ್ಲಿ 327* (ಕೇನ್ ವಿಲಿಯಮ್ಸನ್ 69, ಡೆರಿಯಲ್ ಮಿಚೆಲ್ 134, ಫಿಲಿಪ್ಸ್ 41, ಮೊಹಮದ್ ಶಮಿ 57ಕ್ಕೆ 7, ಬುಮ್ರಾ 64ಕ್ಕೆ 1, ಸಿರಾಜ್ 78ಕ್ಕೆ 1, ಕುಲದೀಪ್ ಯಾದವ್ 56ಕ್ಕೆ 1).

Bottom Add3
Bottom Ad 2

You cannot copy content of this page