Karnataka News

*ಪ್ರವಾಸಿಗರಿಗೆ ಗುಡ್ ನ್ಯೂಸ್: ರಂಗನತಿಟ್ಟಿನಲ್ಲಿ 3 ಹೊಸ ವಿಹಾರ ದೋಣಿಗಳ ಲೋಕಾರ್ಪಣೆ*

ಗೆಂಡೆಹೊಸಹಳ್ಳಿ ದ್ವೀಪವನ್ನು ರಂಗನತಿಟ್ಟಿನ ರೀತಿ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮದಲ್ಲಿ ಬನ್ನೇರುಘಟ್ಟದಲ್ಲಿ ಇರುವ ರೀತಿಯಲ್ಲೇ ಚಿಟ್ಟೆಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಹೊಸ ಆಕರ್ಷಣೆ ಕಲ್ಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ ಇಂದು 3 ಹೊಸ ವಿಹಾರ ದೋಣಿಗಳನ್ನು ಉದ್ಘಾಟಿಸಿದ ತರುವಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸಲು ಮತ್ತು ರಂಗನತಿಟ್ಟಿನ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಸೂಚನೆ ನೀಡಿದರು.


ರಂಗನತಿಟ್ಟಿನಲ್ಲಿ ಈಗಾಗಲೇ ಇರುವ ದೋಣಿಗಳಿಗೆ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ, ತುಂಗಾ, ಕೃಷ್ಣಾ ಎಂದು ಹೆಸರಿಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂದು ಉದ್ಘಾಟಿಸಲಾದ ದೋಣಿಗಳಿಗೆ ಮಾಂಜ್ರಾ, ಗೋದಾವರಿ, ಕಾರಂಜಾ ನದಿಗಳ ಹೆಸರಿಡುವಂತೆ ಸಲಹೆ ನೀಡಿದರು.


ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ:
ಅರಣ್ಯ ಇಲಾಖೆಯ ಚಾರಣ, ಸಫಾರಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣದಲ್ಲಿ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಪ್ರವೇಶದ ಟಿಕೆಟ್ ಮತ್ತು ದೋಣಿ ವಿಹಾರದ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಲು ಸೂಚಿಸಿದರು.


ಗೆಂಡೆಹೊಸಹಳ್ಳಿ ದ್ವೀಪ ಅಭಿವೃದ್ಧಿಗೆ ಪ್ರಸ್ತಾವನೆ ಮಂಡಿಸಲು ಸೂಚನೆ :
ರಂಗನತಿಟ್ಟು ಬಳಿಯ ಗೆಂಡೆ ಹೊಸಹಳ್ಳಿ ದ್ವೀಪದಲ್ಲಿ ಕೂಡ ನೂರಾರು ಬಗೆಯ ಪಕ್ಷಿಗಳು ಬಂದು ಗೂಡುಕಟ್ಟಿ, ಸಂತಾನೋತ್ಪತ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ದ್ವೀಪವನ್ನು ಕೂಡ ರಂಗನತಿಟ್ಟು ರೀತಿಯಲ್ಲೇ ಅಭಿವೃದ್ದಿ ಪಡಿಸಿ, ಪ್ರವಾಸಿ ತಾಣವಾಗಿ ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.


ದೋಣಿವಿಹಾರ ನಡೆಸಿದ ಅರಣ್ಯ ಸಚಿವರು:
ಕಾವೇರಿ ನದಿಯಲ್ಲಿ ದೋಣಿವಿಹಾರ ನಡೆಸಿದ ಅರಣ್ಯ ಸಚಿವರು ಬಂಡೆಗಳ ಮೇಲೆ ಮಲಗಿದ್ದ ಬೃಹತ್ ಗಾತ್ರದ ಮೊಸಳೆಗಳು, ದೂರ ದೂರದಿಂದ ಸಂತಾನೋತ್ಪತ್ತಿಗಾಗಿ ಆಗಮಿಸಿರುವ ಪೆಲಿಕಾನ್, ರಿವರ್ ಟರ್ನ್, ಕಾರ್ಮೊರೆಂಟ್, ಪೈಡ್ ಕಿಂಗ್ ಫಿಷರ್ ಮೊದಲಾದ ಪಕ್ಷಿಗಳನ್ನು ವೀಕ್ಷಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button