
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರ ರಾಣಿ ಚನ್ನಮ್ಮನ 200ನೇ ವರ್ಷದ ವಿಜಯೋತ್ಸವ ಹಾಗೂ ರಾಣಿ ಚನ್ನಮ್ಮಳ ಇತಿಹಾಸವನ್ನು ನಾಡಿಗೆ ಸಾರುವ ಉದ್ದೇಶದೊಂದಿಗೆ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಉತ್ಸವವು ಚನ್ನಮ್ಮಳ ಐತಿಹಾಸಿಕ ಹೋರಾಟದ ಮಹತ್ವವನ್ನು ಸಾರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಕಾಕತಿಯಲ್ಲಿ ಬುಧವಾರ (ಅ.23) ಜರುಗಿದ ಕಿತ್ತೂರು ಉತ್ಸವ-2024, ವಿಜಯೋತ್ಸವದ 200ನೇ ವರ್ಷಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಕತಿಯಿಂದಲೆ ರಾಣಿ ಚನ್ನಮ್ಮಳ ಇತಿಹಾಸ ಪ್ರಾರಂಭವಾಗುವ ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಕಿತ್ತೂರು ಉತ್ಸವವನ್ನು ಕಾಕತಿಯಲ್ಲಿ ಸಾಂಕೇತಿಕವಾಗಿ ಪ್ರಾರಂಭಿಸಲಾಗುತ್ತಿದೆ ಎಂದರು.

ಸ್ವಾತಂತ್ರ್ಯಕ್ಕಾಗಿ ಅನೇಕ ಮಹನಿಯರು ಹೊರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುತ್ತಾರೆ. ಈ ಸಾಲಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಕೂಡ ಮೊದಲಿಗರಾಗಿದ್ದು, ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನು ಮುಡುಪಾಗಿಟ್ಟು ಅಪ್ರತಿಮವಾಗಿ ಹೋರಾಡಿದ ಮಹಾನುಭಾವೆಯಾಗಿದ್ದಳು.
ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೊರಾಟ ನಡೆಸಿ ನಾಡು ನುಡಿಗಾಗಿ ತನ್ನ ಪ್ರಾಣವನ್ನು ಮುಡುಪಾಗಿಟ್ಟಿದ ಕಿತ್ತೂರು ರಾಣಿ ಚನ್ನಮ್ಮಳ ಇತಿಹಾಸವನ್ನು ಪ್ರತಿಯೊಬ್ಬರಿಗೂ ತಿಳಿಯಪಡಿಸುವುದು ಉತ್ಸವದ ಮುಖ್ಯ ಉದ್ದೇಶಾವಗಿದೆ.
ಮುಂದಿನ ದಿನಗಳಲ್ಲಿ ಬೇರೆ ತಾಲೂಕುಗಳಲ್ಲಿ ಸಹ ಕಿತ್ತೂರಿನ ಇತಿಹಾಸ ಸಾರುವಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವದು . ಇದರ ಜೊತೆಗೆ ಕಿತ್ತೂರು ಹಾಗೂ ಕಾಕತಿ ಅಭಿವೃದ್ದಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತಾವರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಗಣ್ಯರುಗಳಾದ ಸಿದ್ದು ಸುಣಗಾರ, ಅಯ್ಯಪ್ಪ ಕೊಳೆಕರ ಹಾಗೂ ಎಸ್.ಡಿ.ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ.ಗುರುದೇವಿ ಹುಲೆಪ್ಪನವರಮಠ ಅವರು, ಚನ್ನಮ್ಮಾಜಿಯ ಇತಿಹಾಸ ಹಾಗೂ ಸಾಧನೆಗಳಕುರಿತು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಆದ ರಾಣಿ ಚನ್ನಮ್ಮನ ತವರೂರಾದ ಕಾಕತಿ 280 ಗ್ರಾಮಗಳಲ್ಲಿ ಆಡಳಿತ ವ್ಯಾಪ್ತಿ ಹೊಂದಿದ್ದ ಕಿತ್ತೂರು 239 ವರ್ಷಗಳ ಕಾಲ ಆಡಳಿತ ನಡೆಸಿದೆ. ಬ್ರಿಟಿಷರು ಕಿತ್ತೂರು ಸಂಸ್ಥಾನದ ವಿರುದ್ಧ ಮೊದಲು ಸೋಲು ಕಂಡಿತು. ರಾಣಿ ಚನ್ನಮ್ಮಳ ಜೀವನ ಹಾಗೂ ಸಾಧನೆಗಳು ನಮಗೆಲ್ಲ ಆದರ್ಶಗಳಾಗಿವೆ.
ಚನ್ನಮ್ಮಾಜಿ ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಯ ಕೀರ್ತಿ ತಂದಂತಹ ಮಹಾನು ಭಾವೆಯಾಗಿದ್ದಾಳೆ. ಚನ್ನಮ್ಮ ನಾಡಾಭಿಮಾನ, ಧೈರ್ಯ ಇಂದು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಡಾ.ಗುರುದೇವಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಾಕತಿಯ ಉದಯ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.

ಭವ್ಯ ಮೆರವಣಿಗೆ, ಮಾಲಾರ್ಪಣೆ:
ಕಾರ್ತಕ್ರಮಕ್ಕೂ ಮುನ್ನ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಆಕರ್ಷಕ ಮೆರವಣಿಗೆಗೆ ಚಾಲನೆ ನೀಡಿದರು.
ಕಾಕತಿಯ ಪಿ.ಬಿ.ರಸ್ತೆಯಿಂದ ಪ್ರಾರಂಭವಾದ ಆಕರ್ಷಕ ಮೆರವಣಿಗೆಗೆ ಪೂರ್ಣಕುಂಬ ಮೇಳ, ಪಥಸಂಚಲನ, ವಿವಿಧ ಜಾನಪದ ಕಲಾ ತಂಡಗಳು ಹಾಗೂ ಅಪರ ಸಂಖ್ಯೆಯ ಜನಸ್ತೊಮದೊಂದಿಗೆ ಕಾಕತಿಯ ರಾಣಿ ಚನ್ನಮ್ಮಳ ಪ್ರತಿಮೆಗೆ ಆಗಮಿಸಿ ಮುಕ್ತಾಯಗೊಂಡಿತು. ತದನಂತರ ರಾಣಿಚನ್ನಮ್ಮಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ರಾಜು (ಆಸೀಫ್) ಸೇಠ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆ, ಗ್ರಾ.ಪಂ.ಅಧ್ಯಕ್ಷ ವರ್ಷಾ ಮುಚ್ಚಂಡಿಕರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕಾಕತಿ ಉತ್ಸವ ಸಮಿತಿ ಸದಸ್ಯರು, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ