Belagavi NewsBelgaum NewsKannada NewsKarnataka NewsLatest

*3 ದಶಕ ಪೂರೈಸಿದ ರಾಣಿ ಚೆನ್ನಮ್ಮ ಬ್ಯಾಂಕ್ : ಮಹಿಳಾ ಸಬಲೀಕರಣಕ್ಕೆ ದೊಡ್ಡ ಕೊಡುಗೆ*

ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಉದ್ಘಾಟನೆಯ ಸಂದರ್ಭದ ಚಿತ್ರ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಮಹಿಳೆಯರ ಆರ್ಥಿಕ ಸಬಲೀಕರಣದ ಧ್ಯೇಯದೊಂದಿಗೆ 16.02.1997 ರಂದು ಸಂಪೂರ್ಣ ಪ್ರಮಾಣದ ನಗರ ಸಹಕಾರಿ ಬ್ಯಾಂಕಾಗಿ ಕಾರ್ಯಾರಂಭ ಮಾಡಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ ಇಂದು 30 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿ, ಬಲಿಷ್ಠ ಆರ್ಥಿಕ ಸಂಸ್ಥೆಯಾಗಿ ಹೊರಹೊಮ್ಮಿದೆ.

ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು, ಹಣಕಾಸು ಶಿಸ್ತಿನ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ಮತ್ತು ನಿರಂತರ ಬೆಂಬಲ ಒದಗಿಸಲು ಬ್ಯಾಂಕ್ ಸ್ಥಾಪಿಸಲಾಯಿತು. ಬ್ಯಾಂಕನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಲೀಲಾದೇವಿ ಪ್ರಸಾದ್ ಅವರು ಉದ್ಘಾಟಿಸಿದ್ದು, ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೊರೆಯವರ ಮಾರ್ಗದರ್ಶನ ಮತ್ತು ಆಶೀರ್ವಾದ ಬ್ಯಾಂಕಿಗೆ ಬಲವಾದ ಆಧಾರ ಒದಗಿಸಿತು.

ಅಂತೆಯೆ ಬ್ಯಾಂಕಿನ ಸ್ಥಾಪನೆಯ ಸಮಯದಲ್ಲಿ ದಿವಂಗತ ವಿಜಯಬಸಪ್ಪ ಎಂ. ಪಟ್ಟೇದ ಹಾಗೂ ದಿವಂಗತ ಮಲ್ಲಯ್ಯ ಸ್ವಾಮಿ ಕವಟಗಿಮಠ, ದಿವಂಗತ ಶ್ರೀಕಾಂತ ಎಂ. ಜನವಾಡೆ ಅವರು ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಮೌಲಿಕವಾದ ಯೋಗದಾನವನ್ನು ನೀಡಿದ್ದಾರೆ.

ಆಶಾ ಕೋರೆಯವರ ಅನನ್ಯ ಕೊಡುಗೆ :
ಸ್ಥಾಪಕ ಅಧ್ಯಕ್ಷರಾದ ಆಶಾ ಪಿ. ಕೋರೆ ಹಾಗೂ ಇತರೆ ಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಬ್ಯಾಂಕ್ ತನ್ನ ಪಯಣವನ್ನು 3,036 ಮಹಿಳಾ ಸದಸ್ಯರಿಂದ ಸಂಗ್ರಹಿಸಲಾದ ₹32 ಲಕ್ಷ ರೂ. ಶೇರು ಮೊತ್ತ ಮತ್ತು ₹18.60 ಲಕ್ಷ ರೂ. ಠೇವಣಿಯೊಂದಿಗೆ ಪ್ರಾರಂಭಿಸಿತು. ಆಶಾ ಕೋರೆ ಅವರು ಕೆಲವೇ ವರ್ಷಗಳಲ್ಲಿ ಸಹಕಾರಿ ಬ್ಯಾಂಕನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿ ಸಮಾನವಾಗಿ ಕೊಂಡೊಯ್ದರು. ಅಂದಿನ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕಿನ ಗ್ರಾಹಕರಿಗೆ ಹೊಸ ಹೊಸ ಉಪಕ್ರಮಗಳನ್ನು ಒದಗಿಸಿಕೊಟ್ಟರು.

Home add -Advt

ಮಹಿಳಾ ದ್ವನಿಯನ್ನು ಸಹಕಾರಿ ಮೂಲಕ ಗಟ್ಟಿಗೊಳಿಸಿದರು. ಮಹಿಳೆಯರು ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಸಿದ್ದಾಂತವನ್ನು ಸಹಕಾರಿ ಮೂಲಕ ಜೀವಂತ ಗೊಳಿಸಿದರು. ಸುಮಾರು 70ಕ್ಕೂ ಹೆಚ್ಚು ಮಹಿಳೆಯರು ಇಂದು ಈ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಹಿಂದಿನ ಶಕ್ತಿ ಆಶಾ ಪ್ರಭಾಕರ್ ಕೋರೆ. ಒಟ್ಟಿನಲ್ಲಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅನುಪಮವಾದದು.

ಬ್ಯಾಂಕ್ ಅಧ್ಯಕ್ಷೆ ಡಾ.ಪ್ರೀತಿ ದೊಡ್ಡವಾಡ

ಇಂದು, ಅಧ್ಯಕ್ಷರಾದ ಡಾ. ಪ್ರೀತಿ ದೊಡ್ಡವಾಡ್ ಅವರ ನಾಯಕತ್ವದಲ್ಲಿ ಬ್ಯಾಂಕ್ ನಾಲ್ಕು ಪಟ್ಟು ಪ್ರಗತಿಯನ್ನು ಸಾಧಿಸಿದೆ. ಪ್ರಸ್ತುತ ಬ್ಯಾಂಕ್ ₹430 ಕೋಟಿ ರೂ. ಠೇವಣಿ, ₹265 ಕೋಟಿ ರೂ. ಮುಂಗಡಗಳನ್ನು ಹೊಂದಿದ್ದು ₹8.94 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ.


ಶಾಖಾ ವಿಸ್ತರಣೆ ಮತ್ತು ತಂತ್ರಜ್ಞಾನ ಸೌಲಭ್ಯ:

ಬ್ಯಾಂಕ್ ಪ್ರಸ್ತುತ ಒಟ್ಟು 9 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಬೆಳಗಾವಿಯಲ್ಲಿ 4 ಶಾಖೆಗಳು ಹಾಗೂ ಹುಬ್ಬಳ್ಳಿ, ಸೌಂದತ್ತಿ, ಗೋಕಾಕ್, ಅಥಣಿ ಮತ್ತು ಚಿಕ್ಕೋಡಿಗಳಲ್ಲಿ ಶಾಖೆಗಳು ಸೇವೆ ಸಲ್ಲಿಸುತ್ತಿವೆ.
ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಬ್ಯಾಂಕ್, CBS, ಸ್ವಂತ ಎಟಿಎಂ, ಡೆಬಿಟ್ ಕಾರ್ಡ್‌ಗಳು, ಯುಪಿಐ, ಎಸ್‌ಎಂಎಸ್ ಅಲರ್ಟ್‌ಗಳು, ಐಎಂಪಿಎಸ್, ಮೊಬೈಲ್ ಬ್ಯಾಂಕಿಂಗ್, NEFT/RTGS, ಚೆಕ್ ಹಾಗೂ ಡಿಡಿ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಶೂನ್ಯ ನಿವ್ವಳ ಎನ್‌ಪಿಎ – ಶಿಸ್ತಿನ ಸಂಕೇತ:
ಬ್ಯಾಂಕ್ ನಿರಂತರವಾಗಿ ಶೂನ್ಯ ನಿವ್ವಳ ಎನ್‌ಪಿಎ (Zero Net NPA)ಯನ್ನು ಕಾಯ್ದುಕೊಂಡಿದೆ. 31.03.2025ರಂತೆ ಒಟ್ಟು ಎನ್‌ಪಿಎ ₹3.88 ಕೋಟಿಗಳು (1.53%) ಆಗಿದ್ದು, ಪ್ರತಿವರ್ಷವೂ “ಎ” ದರ್ಜೆಯನ್ನು ಪಡೆದುಕೊಂಡಿದೆ. ಇದು ಬ್ಯಾಂಕಿನ ದಕ್ಷ ನಿರ್ವಹಣೆ ಮತ್ತು ಆರ್ಥಿಕ ಶಿಸ್ತಿನ ಸ್ಪಷ್ಟ ಉದಾಹರಣೆಯಾಗಿದೆ.


ಮಹಿಳಾ ಸ್ನೇಹಿ ನೀತಿಗಳು:
ಮಹಿಳಾ ಬ್ಯಾಂಕಾಗಿರುವುದರಿಂದ ಬ್ಯಾಂಕಿನ 95% ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ. ಮಹಿಳಾ ಸಾಲಗಾರರಿಗೆ ಸಾಲದ ಬಡ್ಡಿದರದಲ್ಲಿ 1% ರಿಯಾಯಿತಿ ಹಾಗೂ ಪ್ರಕ್ರಿಯಾ ಶುಲ್ಕ ವಿನಾಯಿತಿ ನೀಡುವುದು ಬ್ಯಾಂಕಿನ ವಿಶೇಷತೆ.
ಸಾಮಾಜಿಕ ಬದ್ಧತೆ:
ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಬ್ಯಾಂಕ್ ಪ್ರತಿವರ್ಷ ಮಹಿಳಾ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಾಲಕಿಯರಿಗೆ ಆರ್ಥಿಕ ನೆರವು, ಹಿಂದುಳಿದ ಬಾಲಕಿಯರ ಶಿಕ್ಷಣದ ಹೊಣೆಗಾರಿಕೆ ವಹಿಸಿಕೊಳ್ಳುವುದು ಹಾಗೂ ಬಾಲಕಿಯರಿಗಾಗಿ ಸ್ವಚ್ಛ ಮತ್ತು ಆರೋಗ್ಯಕರ ಶೌಚಾಲಯಗಳ ನಿರ್ಮಾಣಕ್ಕೆ ಸಿಎಸ್‌ಆರ್ ನಿಧಿಗಳನ್ನು ಬಳಸುವ ಯೋಜನೆಗಳನ್ನು ಕೈಗೊಂಡಿದೆ.


ಅಸಂಖ್ಯ ಪ್ರಶಸ್ತಿಗಳ ಗೌರವ:
ಅತ್ಯುತ್ತಮ ಬ್ಯಾಂಕ್, ಅತ್ಯುತ್ತಮ ಲಾಭ ಗಳಿಸುವ ಬ್ಯಾಂಕ್, ಅತ್ಯುತ್ತಮ ಎನ್‌ಪಿಎ ನಿರ್ವಹಣಾ ಬ್ಯಾಂಕ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬ್ಯಾಂಕ್ ತನ್ನ ಮುಡಿಗೇರಿಸಿಕೊಂಡಿದೆ.


ಭವಿಷ್ಯದ ದೃಷ್ಟಿ:
ಭವಿಷ್ಯದಲ್ಲಿ ಬಹುರಾಜ್ಯ ಸಹಕಾರಿ ಬ್ಯಾಂಕಾಗಿ ಪರಿವರ್ತನೆಗೊಳ್ಳುವುದು, ಶಾಖಾ ಜಾಲವನ್ನು ವಿಸ್ತರಿಸುವುದು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಗ್ರಾಹಕರ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸುಧಾರಿಸುವುದು ಬ್ಯಾಂಕಿನ ದೃಷ್ಟಿಯಾಗಿದೆ.

ನಿರ್ದೇಶಕ ಮಂಡಳಿ:
ಪ್ರಸ್ತುತ ನಿರ್ದೇಶಕ ಮಂಡಳಿಯಲ್ಲಿ ಡಾ. ಪ್ರೀತಿ ದೊಡ್ಡವಾಡ (ಅಧ್ಯಕ್ಷರು), ರೂಪಾ ಜೆ. ಮುನವಳ್ಳಿ (ಉಪಾಧ್ಯಕ್ಷರು) ಸೇರಿದಂತೆ ಆಶಾ ಪಿ. ಕೋರೆ, ರಾಜೇಶ್ವರಿ ಎಂ. ಕವಟಗಿಮಠ, ಅರುಂಧತಿ ಎ. ಪಟ್ಟೇದ್, ಡಾ. ಸುವರ್ಣಲತಾ ಎನ್. ಬನ್ಸೋಡೆ, ದೀಪಾ ಎಸ್. ಮುನವಳ್ಳಿ, ಪೂಜಾ ಕೆ. ಸಾಧುನವರ, ಕೀರ್ತಿ ಜೆ. ಮೆಟಗುಡ್, ಸೀಮಾ ಪಿ. ಬಾಗೇವಾಡಿ, ಗಿರಿಜಾ ಎಂ. ಕೌಜಲಗಿ, ಡಾ. ಪುಷ್ಪಾ ಎಂ. ಮಮದಾಪುರ ಹಾಗೂ ವೃತ್ತಿಪರ ನಿರ್ದೇಶಕರಾದ ಜ್ಯೋತಿ ಜಿ. ಮಠದ ಮತ್ತು ಬೀನಾ ಜಿ. ಆಚಾರ ಸೇರಿದ್ದಾರೆ.
30 ವರ್ಷಗಳ ಸಮರ್ಪಿತ ಸೇವೆಯೊಂದಿಗೆ ಬೆಳಗಾವಿ ಜಿಲ್ಲೆಯ ಮಹಿಳೆಯರ ವಿಶ್ವಾಸವನ್ನು ಗೆದ್ದಿರುವ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರಗಳನ್ನು ಸಾಧಿಸುವ ವಿಶ್ವಾಸದೊಂದಿಗೆ ತನ್ನ ಪಯಣವನ್ನು ಮುಂದುವರಿಸಿದೆ.

Related Articles

Back to top button