ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಿವಾಹವಾಗುವುದಾಗಿ ಹೇಳಿ ವಿವಾಹಿತ ಮಹಿಳೆಯ ಜೊತೆ ದೈಹಿಕ ಸಂಬಂಧ ಬೆಳೆಸಿ, ನಂತರ ವಿವಾಹಕ್ಕೆ ಒತ್ತಾಯಿಸಿದಾಗ ಕೊಲೆಗೈದ ಆರೋಪ ಸಾಬೀತಾಗಿದ್ದು, ಗುರುವಾರ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ.
೨೦೧೫ರ ಆಗಸ್ಟ್ ೧೮ರಂದು ವಿವಾಹಿತ ಯುವತಿಯ ಕೊಲೆ ಮಾಡಲಾಗಿತ್ತು. ರಾಮದುರ್ಗ ತಾಲ್ಲೂಕಿನ ಬಟಕುರ್ಕಿ ಗ್ರಾಮದ ಮಹಾಲಿಂಗಪ್ಪ ಜೀವಪ್ಪ ದುಗಾಣಿ ಎಂಬುವರು ದೂರು ನೀಡಿದರು.
ವಿವಾಹಿತ ಮಹಿಳೆಯ ಜತೆ ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ನಂತರ ವಿವಾಹಕ್ಕೆ ಒತ್ತಾಯಿಸಿದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಪ್ರೇಮಿ ಆರೋಪಿ ಎಂದು ಇಲ್ಲಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮೃತ ಯುವತಿ ಚಿಕ್ಕನರಗುಂದ ಗ್ರಾಮದವಳೆಂದು ಗುರುತು ಪತ್ತೆಯಾಗುತ್ತದೆ. ಈ ಯುವತಿಗೆ ಮದುವೆಯಾಗುವುದಾಗಿ ನಾಟಕವಾಡಿ ಕೊಲೆ ಮಾಡಿರುವುದಾಗಿ ಆಕೆಯ ಸಹೋದರ ಹೇಳುತ್ತಾನೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಸಂಕದಾಳದ ನಿವಾಸಿ ಹುಸೇನಸಾಬ ಫಕೀರಸಾಬ ನದಾಫ ಎಂಬಾತನೇ ಕೊಲೆ ಮಾಡಿರುವುದು ಪತ್ತೆಯಾಗಿದೆ.
ವಿವಾಹಿತಳಾದ ಯುವತಿ ಪಂಚಮಿ ಹಬ್ಬಕ್ಕೆಂದು ಬಟಕುರ್ಕಿಯ ತವರು ಮನೆಗೆ ಬಂದಾಗ ಅಲ್ಲಿಯೇ ಗಾರೆ ಕೆಲಸ ಮಾಡುತ್ತಿದ್ದ ಹುಸೇನ ಸಾಬನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗಲು ಆಸೆ ಪಟ್ಟಿದ್ದಾರೆ. ವಿವಾಹಿತ ಮಹಿಳೆ ಎಂಬುದನ್ನು ಅರಿತುಕೊಂಡು ಆಕೆಯ ಜತೆ ದೈಹಿಕ ಸಂಬಂಧ ಬೆಳೆಸುವ ಉದ್ದೇಶದಿಂದ ಆರೋಪಿ ಆಕೆಯನ್ನು ಮದುವೆಯಾಗುವುದಾಗಿ ನಾಟಕವಾಡಿ ತನ್ನ ಆಸೆ ತೀರಿಸಿಕೊಂಡಿದ್ದಾನೆ.
ಆದರೆ ಯಥಾಪ್ರಕಾರ ಇವರಿಬ್ಬರೂ ಬೈಕಿನಲ್ಲಿ ಆ.೧೭, ೨೦೧೫ರಂದು ರಾತ್ರಿ ಶೈಲುಘಟ್ಟದ ಖಾಲಿ ಜಮೀನಿನ ಕಡೆಗೆ ಬಂದಿದ್ದಾರೆ. ಈ ವೇಳೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನೀನು ನನ್ನನ್ನು ಮದುವೆಯಾಗುವುದು ಯಾವಾಗ? ಎಂದು ಯುವತಿ ಕೇಳಿದ್ದಾಳೆ. ಈ ವೇಳೆ ಹುಸೇನ ಸಾಬ ಮದುವೆಗೆ ನಿರಾಕರಿಸಿದ್ದಾನೆ. ಆಕ್ರೋಶಗೊಂಡ ಯುವತಿ ನೀನು ನನಗೆ ಮೋಸ ಮಾಡಿರುವ ವಿಚಾರವನ್ನು ನನ್ನ ಮನೆಯಲ್ಲಿ ಸಹೋದರನಿಗೆ ತಿಳಿಸುತ್ತೇನೆ. ಅವರು ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಧಮಕಿ ಹಾಕಿ, ನಾವಿಬ್ಬರೂ ಓಡಿಹೋಗಿ ಮದುವೆಯಾಗೋಣ. ಇಲ್ಲವಾದರೆ ನೀನು ನನ್ನ ಜತೆ ಇದ್ದು ನನಗೆ ವಂಚನೆ ಮಾಡಿದ್ದನ್ನು ನಿನ್ನ ಮನೆಯವರಿಗೂ ಸುದ್ದಿ ಮುಟ್ಟಿಸುತ್ತೇನೆ ಎಂದು ಹೆದರಿಸುತ್ತಾಳೆ.
ಇದರಿಂದ ಆಕ್ರೋಶಗೊಂಡ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಅವಳು ಧರಿಸಿದ್ದ ಚೂಡಿದಾರದ ವೇಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಲು ಮುಂದಾಗುತ್ತಾನೆ. ನಂತರ ಆಕೆಯ ದೇಹದ ಮೇಲಿರುವ ಎಲ್ಲಾ ಬಟ್ಟೆ ಮತ್ತು ಆಭರಣಗಳನ್ನು ಎತ್ತಿಕೊಂಡು ಶವವನ್ನು ಮೂಲೆಯಲ್ಲಿ ಮಲಗಿಸಿ ಜಾಗ ಖಾಲಿ ಮಾಡುತ್ತಾನೆ.
ಮರುದಿನ ಮುಂಜಾನೆ ಈ ಜಾಗದಿಂದ ಸಾಗುತ್ತಿದ್ದವರಿಗೆ ಯುವತಿಯ ಬೆತ್ತಲೆ ಶವ ಕಂಡಿದೆ. ಯುವತಿಯ ಸಹೋದರನೂ ತಂಗಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡುತ್ತಾನೆ. ಪ್ರಕರಣ ದಾಖಲಿಸಿದ ಪೊಲೀಸರು ಹುಸೇನಸಾಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಕೊಲೆ ಹಿಂದಿನ ರಹಸ್ಯವನ್ನು ಬೇಧಿಸುತ್ತಾರೆ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುತ್ತದೆ.
ಪ್ರಕರಣದ ವಿಚಾರಣೆ ನಡೆಸಿದ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿ.ಬಿ. ಸೂರ್ಯವಂಶಿ ಪ್ರಕರಣದ ಸಾಕ್ಷಿಗಳನ್ನು ಪರಿಶೀಲಿಸಿ ಆರೋಪಿ ಅಪರಾಧ ಮಾಡಿರುವುದಾಗಿ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಶಿಕ್ಷೆಯ ಪ್ರಮಾಣದ ತೀರ್ಪನ್ನು ಗುರುವಾರ ವಿಧಿಸಲಿದೆ. ಸರ್ಕಾರದ ಪರವಾಗಿ ಅಭಿಯೋಜಕ ಕಿರಣ್ ಎಸ್. ಪಾಟೀಲ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ