*ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ*: *ಆರೋಪಿಗೆ ನಾಳೆ ಶಿಕ್ಷೆ ಪ್ರಕಟ*

ಕಳೆದ ವರ್ಷದ ಮೈಸೂರು ದಸರಾ ಮಹೋತ್ಸವದ ವೇಳೆ ಬಲೂನ್ ಮಾರಾಟಕ್ಕೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಕಾರ್ತಿಕ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮೈಸೂರಿನ ತ್ವರಿತಗತಿ ನ್ಯಾಯಾಲಯ ಅಕ್ಟೋಬರ್ 16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ದಸರಾ ಸಮಯದಲ್ಲೇ ನಡೆದಿದ್ದ ಈ ಘೋರ ಘಟನೆಗೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.
ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಕಾರ್ತಿಕ್ನನ್ನು ಬಂಧಿಸಿದ್ದರು. ಮೈಸೂರಿನ FTSC-1 ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಂತಿ ವಾದ ಮಂಡಿಸಿದ್ದರು. ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಅನಿಲ್ ಪಿ. ವಘಾಢೆ ಅವರು ಕಾರ್ತಿಕ್ ದೋಷಿ ಎಂದು ಘೋಷಿಸಿದ್ದಾರೆ. ಶಿಕ್ಷೆಯ ಪ್ರಮಾಣದ ಕುರಿತು ನಾಳೆ ತೀರ್ಪು ಪ್ರಕಟವಾಗಲಿದೆ.
ಮೈಸೂರು ದಸರಾ ಸಮಯದಲ್ಲಿ ವ್ಯಾಪಾರ ನಡೆಸಲು ಹಲವು ಕುಟುಂಬಗಳು ದೂರದ ಊರುಗಳಿಂದ ನಗರಕ್ಕೆ ಬರುತ್ತವೆ. ಕಳೆದ ವರ್ಷ ಬಲೂನ್ ಮತ್ತು ಆಟಿಕೆಗಳನ್ನು ಮಾರಾಟ ಮಾಡಲು ಬಂದಿದ್ದ ಕುಟುಂಬವೊಂದು ಅರಮನೆಯ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ವಾಸವಾಗಿತ್ತು. ಈ ಸಂದರ್ಭದಲ್ಲಿ ಅಕ್ಟೋಬರ್ 9ರ ನಸುಕಿನಲ್ಲಿ ಬಾಲಕಿ ನಾಪತ್ತೆಯಾಗಿದ್ದು, ಬಳಿಕ ಆಕೆ ಕೊಲೆಯಾಗಿರುವುದು ಪತ್ತೆಯಾಗಿತ್ತು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಚುರುಕುಗೊಳಿಸಿದ್ದರು. ಘಟನೆ ನಡೆದ 24 ಗಂಟೆಯೊಳಗೆ ಕಾರ್ತಿಕ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮೈಸೂರಿನ ಸಿದ್ದಲಿಂಗಪುರದ ನಿವಾಸಿಯಾಗಿರುವ ಕಾರ್ತಿಕ್, ಮೈಸೂರು–ಕೊಳ್ಳೇಗಾಲ ಮಾರ್ಗದ ಬಸ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತನಿಖೆಯ ವೇಳೆ ಲಭ್ಯವಾಗಿತ್ತು.
ಈ ಪ್ರಕರಣ ಮೈಸೂರು ಮಾತ್ರವಲ್ಲದೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನ್ಯಾಯಾಲಯ ಕಾರ್ತಿಕ್ನನ್ನು ದೋಷಿ ಎಂದು ಘೋಷಿಸಿದ್ದು, ಅಕ್ಟೋಬರ್ 16ರಂದು ಪ್ರಕಟವಾಗಲಿರುವ ಶಿಕ್ಷೆಯ ಪ್ರಮಾಣದ ಕುರಿತು ಕುತೂಹಲ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




