*ದೆವ್ವ ಬಿಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ*: *ಸತೀಶ್ ಪಾತ್ರಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳ ಮೂಢನಂಬಿಕೆಯನ್ನೇ ಬಳಸಿಕೊಂಡ ಮಾಂತ್ರಿಕನೊಬ್ಬ ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯನ್ನು ನಂಬಿಸಿ ಆಕೆ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ವಾಮಾಚಾರ ನಡೆದಿದೆ, ಭೂತ ಬಿಡಿಸುತ್ತೇನೆ ಎಂದು ಮಹಿಳೆಯನ್ನು ನಂಬಿಸಿ ಆಕೆಯ ಮೇಲೆ ನಿರಂಯರ ಅತ್ಯಾಚಾರವೆಸಗಿದ್ದ ಆರೋಪಿ, ಪ್ರಕರಣ ದಾಖಲಾಗುತ್ತಿದ್ದಂತೆ ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ.
ಹಾಸನ ಮೂಲದ ಮಹಿಳೆ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು. ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.
ಇದೀಗ ಆರೋಪಿಯನ್ನು ಬೆಂಗಳೂರಿನ ಜೆ.ಪಿ.ನಗರದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಸತೀಶ್ ಪಾತ್ರಿ ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿರುವ ಆಘಾತಕಾರಿ ವಿಚಾರ ಹೊರಬಂದಿತ್ತು. ಸತೀಶ್ ಪಾತ್ರಿಯ ಅಮಾನವೀಯ ಕೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕರಾವಳಿ ಭಾಗದಲ್ಲಿ ಈತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಕೊನೆಗೂ ಆರೋಪಿ ಸತೀಶ್ ಪಾತ್ರಿಯ ಬಂಧನವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




