ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು ೨ ಕೆಜಿ ತೂಗುವ ಗಂಡು ಹಸುಗೂಸು ತೀವ್ರ ಹೊಟ್ಟೆ ಉಬ್ಬುವಿಕೆಯಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.
ಆಸ್ಪತ್ರೆಗೆ ತೆಗೆದುಕೊಂಡು ಬಂದ ತಕ್ಷಣ ಸಮಗ್ರವಾಗಿ ತಪಾಸಿಸಿದಾಗ ಮತ್ತೊಂದು ಕರುಳು ಬೆಳೆಯುತ್ತಿರುವುದು ಕಂಡು ಬಂದಿತು. ಇದರಿಂದ ಜೀವಕ್ಕೆ ಅಪಾಯವಾಗುವ ಲಕ್ಷಣಗಳಿದ್ದ ಕಾರಣ ಶಸ್ತ್ರಚಿಕಿತ್ಸೆ ನೆರವೇರಿಸಲು ಅಣಿಯಾದಾಗ ಮತ್ತೆ ಸಂಕಷ್ಟ ಎದುರಾಯಿತು, ಆದರೂ ಕೂಡ ೩ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುವುದರ ಮೂಲಕ ಮಗುವಿನ ಪ್ರಾಣ ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಚಿಕ್ಕಮಕ್ಕಳ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸಂತೋಶ ಕುರಬೆಟ್ ಯಶಸ್ವಿಯಾಗಿದ್ದಾರೆ.
ರಾಜ್ಯದ ಗಡಿಯಲ್ಲಿರುವ ಕೂಗನೊಳ್ಳಿ ಗ್ರಾಮದಲ್ಲಿ ಆಗ ತಾನೆ ಜನಿಸಿದ ಮಗುವಿನ ಹೊಟ್ಟೆ ಊದಿಕೊಳ್ಳಲು ಪ್ರಾರಂಭಿಸಿದಾಗ ವೈದ್ಯರು ತಪಾಸಿಸಿ, ಕರುಳಿನ ಹತ್ತಿರವೇ ಮತ್ತೊಂದು ಕರುಳು ಬೆಳೆಯುತ್ತಿರುವುದು ಕಂಡು ಬಂದಿತು. ಅಲ್ಲದೇ ಕರುಳಿನಲ್ಲಿ ತಡೆಯುಂಟಾಗಿ ಯಾವುದೇ ಕಾರ‍್ಯಗಳು ನಡೆಯುತ್ತಿರಲಿಲ್ಲ. ಇದರಿಂದ ಮಗು ಬದುಕುಳಿಯುವುದು ಅತ್ಯಂತ ಕಠಿಣವಾಗಿತ್ತು. ಸುಮಾರು ಎರಡುವರೆ ಗಂಟೆಗೂ ಅಧಿಕ ಸಮಯದವರೆಗೆ ನಡೆದ ೩ ಶಸ್ತ್ರಚಿಕಿತ್ಸೆಯಲ್ಲಿ, ಕರುಳಿನ ಪಕ್ಕದಲ್ಲಿ ಬೆಳೆದ ೨೫ ಸೆ. ಮೀ ಹೆಚ್ಚುವರಿ ಕರಳು, ಇಲಿಯಲ್ ಅಟ್ರೆಸಿಯಾ ಹಾಗೂ ತಡೆಯೊಡ್ಡಲ್ಪಟ್ಟಿದ್ದ ಕರಳನ್ನು ಪುನಃ ಪ್ರಾರಂಭಿಸಿ ಮಗುವಿನ ಹೊಟ್ಟೆಯ ಕಾರ‍್ಯಗಳು ಸುಲಲಿತವಾಗಿ ನಡೆಯುವಂತೆ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಕೇವಲ ೧೨ ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು.
ಕೇವಲ ಎರಡು ಕೆಜಿ ತೂಗುವ ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಕಠಿಣ. ಇದಕ್ಕಾಗಿ ವಿಶೇಷ ಪರಿಣಿತಿಯನ್ನು ಪಡೆದುಕೊಂಡಿರಬೇಕು. ಈ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕ ಆರೋಗ್ಯ ಹಾಗೂ ಆಯುಷ್ಯಮಾನ ಭಾರತ ಯೋಜನೆಯಡಿ ಉಚಿತವಾಗಿ ನೆರವೇರಿಸಲಾಗಿದೆ.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ ಕುರಬೆಟ್ ಅವರಿಗೆ ಡಾ. ಎಸ್ ಎಂ ಧಡೇದ, ಡಾ. ಮನಿಷಾ ಭಾಂಡನಕರ, ಡಾ. ಅನಿಲ ಕಲ್ಲೇಶ, ಡಾ. ಮಹಾಂತೇಶ ಪಾಟೀಲ, ಅರವಳಿಕೆ ತಜ್ಞವೈದ್ಯರಾದ ಡಾ. ಪವನ ಧುಳಖೇಡ ಅವರು ಸಾಥ ನೀಡಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ ಕುರಬೆಟ್ ಹಾಗೂ ಅವರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ.ವಿ. ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ