ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇದು ಮಾರ್ಚ್ ತಿಂಗಳಾಂತ್ಯವಾಗಿದ್ದರಿಂದ ಸಾಲು ಮರುಪಾವತಿ, ಇಎಂ ಐ ಸೇರಿದಂತೆ ಕೆಲ ವಿಚಾರಗಳಲ್ಲು ಆರ್ ಬಿ ಐ ಮೂರು ತಿಂಗಳ ಕಾಲಾವಕಾಶ ನೀಡುವ ಮೂಲಕ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಕೊರೊನಾ ಹಿನ್ನಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಇದೆ. ಇದರಿಂದ ಉದ್ಭವಿಸುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ಒಂದು ಕ್ರಮವಾಗಿ ರೆಪೋ, ರಿವರ್ಸ್ ರೆಪೋ ದರಗಳನ್ನ ಭಾರೀ ಕಡಿತಗೊಳಿಸಿದೆ. ತಿಂಗಳ ಕಂತುಗಳಿಗೆ 3 ತಿಂಗಳ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ರಿಪೋ ದರ 75 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಇದು ಶೇ. 4.4ಕ್ಕೆ ಇಳಿದಿದೆ. ರಿವರ್ಸ್ ರಿಪೋ ದರವನ್ನು 90 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೆ. 5.5ರಷ್ಟಿದ್ದ ರಿವರ್ಸ್ ರಿಪೋ ಈಗ ಶೇ. 4.20ಕ್ಕೆ ಇಳಿಕೆ ಮಾಡಲಾಗಿದೆ. ಸಿಆರ್ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ದರದಲ್ಲೂ ಭಾರೀ ವ್ಯತ್ಯಯವಾಗಿದೆ. 100 ಮೂಲಾಂಕಗಳಷ್ಟು ಇಳಿಕೆಗೊಂಡಿರುವ ಸಿಆರ್ಆರ್ ದರ ಈಗ ಶೇ. 3ಕ್ಕೆ ನಿಗದಿಯಾಗಿದೆ. ಮಾರ್ಚ್ 28ರಿಂದ ಒಂದು ವರ್ಷದ ಅವಧಿಯವರೆಗೆ ಈ ದರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಆರ್ಬಿಐ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗೆ ಸಾಲಗಳ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ 3 ತಿಂಗಳ ವಿನಾಯಿತಿ ನೀಡುವಂತೆ ಸೂಚಿಸಿದೆ. ಅಂದರೆ ಸಾಲ ಪಡೆದವರು ಮೂರು ತಿಂಗಳ ಕಾಲ ಇಎಂಐ ಕಟ್ಟುವ ಅನಿವಾರ್ಯತೆ ಇಲ್ಲ. ಬೇಕಾದರೆ ಕಟ್ಟಬಹುದು, ಬೇಡದಿದ್ದರೆ ಇಲ್ಲ. ಆದರೆ, ಮೂರು ತಿಂಗಳ ನಂತರ ಇಎಂಐ ಮಾಮೂಲಿಯಾಗೇ ಮುಂದುವರಿಯುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ