Kannada NewsLatest

4 ವರ್ಷ ಚನ್ನಮ್ಮ ವಿವಿಯಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ -ಹೊಸಮನಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕಲಿಯುವಿಕೆ ಮತ್ತು ಕಲಿಸುವಿಕೆಗಳಿಗೆ ಎಂದೂ ಕೊನೆ  ಇಲ್ಲ. ಇವು ನಿರಂತರವಾಗಿ ನಡೆಯುವ ಪ್ರಕ್ರಿಯೆಗಳು ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಹೇಳಿದರು.

ಮಹಾಂತೇಶ ನಗರದ ಮಹಾಂತ ಸಭಾ ಭವನದಲ್ಲಿ  ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಮತ್ತು ಆರ್‌ಸಿಯು ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಪ್ರಾಧ್ಯಾಪಕರ ಸಂಘವು ಹಮ್ಮಿಕೊಂಡ ಕಲಿಯುವಿಕೆ, ಕಲಿಸುವಿಕೆ ಮತ್ತು ಮೌಲ್ಯ ಮಾಪನ ಕುರಿತು ಹಮ್ಮಿಕೊಳ್ಳಲಾದ  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಉಪನ್ಯಾಸಕರಲ್ಲಿ ವೃತ್ತಿಯ ಬಗ್ಗೆ ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆ ಅಗತ್ಯವಾಗಿದೆ. ಉಪನ್ಯಾಸಕರು  ಆಧುನಿಕ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಂಪ್ಯೂಟರ್ ಸಾಕ್ಷರತೆ ಎಲ್ಲ ಉಪನ್ಯಾಸಕರಿಗೆ ಅಗತ್ಯ. ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪಾಲಕರಷ್ಟೆ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ಹೇಳಿದರು.

ನಾಲ್ಕು ವರ್ಷಗಳ ಅವಧಿಯಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಸಮಾರಂಭಗಳಲ್ಲಿ ನನಗೆ ಸನ್ಮಾನ ಮಾಡದೆ, ಅದರ ವೆಚ್ಚವನ್ನು ಚೆಕ್ ಮೂಲಕ  ನೀಡಿದರೆ ಅದನ್ನು   ವಿವೇಕಾನಂದ ಅಶ್ರಮ ಮತ್ತು ಮಾಹೇಶ್ವರ ಅಂಧ ಮಕ್ಕಳ ಶಾಲೆಗೆ ನೀಡುತ್ತೇನೆ ಎಂದು  ಹೊಸಮನಿ ತಿಳಿಸಿದರು.

 ಬೆಂಗಳೂರಿನ ನ್ಯಾಕ್ ಕೇಂದ್ರದ ಮೌಲ್ಯ ಮಾಪಕ ಡಾ.ವಿ.ಬಿ.ಹಿರೇಮಠ  ವಿಶೇಷ ಉಪನ್ಯಾಸ ನೀಡಿದರು.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನೆ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   ವೇದಿಕೆಯ ಮೇಲೆ ಬೆಂಗಳೂರಿನ ನ್ಯಾಕ್ ಕೇಂದ್ರದ ಡಾ.ವಿ.ಬಿ.ಹಿರೇಮಠ, ಡಾ.ಎಸ್.ಓ. ಹಲಸಗಿ, ಡಾ.ಸಿ.ವಿ.ಕೊಪ್ಪದ, ಡಾ.ಬಿ.ಎಸ್. ಮಾಳಿ, ಪ್ರೊ. ಡಿ.ಎಸ್.ಗುಡದಿನ್ನಿ, ಸಿಂಡಿಕೇಟ್ ಸದಸ್ಯ ಡಾ.ಎಸ್.ಎಂ. ಜೋಶಿ ಪ್ರೊ.ಬಸವರಾಜ ಗಲಗಲಿ  ಇದ್ದರು.

 ನಿವೃತ್ತ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿ, ಡಾ.ಪ್ರಹ್ಲಾದ ಹುಯಿಲಗೋಳ ಮತ್ತು ಪ್ರೊ.ಪಿ.ಕೆ.ರೆಡ್ಡೇರ ಮತ್ತು ಪಿಎಚ್‌ಡಿ ಪದವಿ ಪಡೆದ ಡಾ.ಜ್ಯೋತಿ ಬಿರಾದಾರ, ಡಾ.ಎಂ.ಬಿ.ಯಾದಗುಡಿ ಅವರನ್ನು ಸನ್ಮಾನಿಸಲಾಯಿತು.

ಕಾಶಪ್ಪ ದೊಡ್ಡಮನಿ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಡಾ.ಆರ್.ಎಂ.ಪಾಟೀಲ ಸ್ವಾಗತಿಸಿದರು. ಡಾ.ಬಿ.ಎಂ.ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಡಾ.ನಿರ್ಮಲಾ ಬಟ್ಟಲ ವಂದಿಸಿದರು. ಡಾ.ವಿದ್ಯಾ ಜೀರಗೆ ನಿರೂಪಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button