ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ೨೦ ನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಸಮಾಜದ ಮುಖ್ಯ ಪ್ರಶ್ನೆಗಳಾದ ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮಿಕ ಸಂಗತಿ, ಕಾರ್ಮಿಕ ಹೋರಾಟಗಳು, ಹೆಣ್ಣು-ಗಂಡಿನ ಸಂಬಂಧದ ಬಗ್ಗೆ ಕಟ್ಟಿಮನಿಯವರು ಬರೆದ ಕಥೆಗಳು, ಕಾದಂಬರಿಗಳು ತಿಳಿಸುತ್ತವೆ ಎಂದು ಮೈಸೂರಿನ ಪ್ರಸಿದ್ದ ವಿಮರ್ಶಕರಾದ ಪ್ರೋ. ಓ.ಎಲ್. ನಾಗಭೂಷಣಸ್ವಾಮಿ ಅವರು ಹೇಳಿದರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ವತಿಯಿಂದ ನಗರದ ಡಾ.ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ(ಅ.5)ಏರ್ಪಡಿಸಲಾಗಿದ್ದ ಅವರ ಕಾದಂಬರಿ, ಕಥಾ ಸಾಹಿತ್ಯ ಪ್ರಶಸ್ತಿ ಪ್ರಧಾನ ಹಾಗೂ ಯುವಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
೨೦ ನೇ ಶತಮಾನದ ಮೊದಲ ಭಾಗದಲ್ಲಿ ಅಧಿಕಾರ, ಅಂತಸ್ತು ಮತ್ತು ಸಾಮಾಜಿಕ ಹಿರಿಮೆ ಇಲ್ಲದೆ ಇರುವಂತ ಒಬ್ಬ ವ್ಯಕ್ತಿ ಹೇಗೆ ಸಮಾಜದ ಪರವಾಗಿ ಮಾತಾಡುವ ಒಬ್ಬ ಲೇಖಕ ಆಗಿ ಬೆಳೆದರು ಎಂಬುದಕ್ಕೆ ಕಟ್ಟಿಮನಿ ಅವರೇ ಸಾಕ್ಷಿ ಎಂದರು.
ಬರವಣಿಗೆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಹಠಸಾಧಿಸಿ ಕಥೆ, ಕಾದಂಬರಿಗಳನ್ನು ಬರೆದ ಮಹಾನ್ ವ್ಯಕ್ತಿ ಕಟ್ಟಿಮನಿಯವರು ಎಂದರು.
ಬಸವರಾಜ ಕಟ್ಟೀಮನಿ ಅವರ ಬಗ್ಗೆ ಜಗತ್ತಿಗೆ ತಿಳಿಸಲು ಸಂಜಯ ನರೇಂದ್ರ ತಯಾರಿಸಿದ ವೆಬ್ ಸೈಟ್ ಹಾಗೂ ಪ್ರೋ. ಧರಣೇಂದ್ರ ಕುರಕುರಿ ಅವರು ರಚಿಸಿದ ಜ್ವಾಲಾಮುಖಿ ಪರ ಹಿಂದಿ ಅನುವಾದಿತ ಕೃತಿಯನ್ನು ಡಾ. ಚಂದ್ರಕಾಂತ ಕುಸನೂರ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಕೇವಲ ಪ್ರಾಂತೀಯ ಭಾಷೆಗೆ ಮಹತ್ವ ನೀಡದೆ ರಾಷ್ಟ್ರೀಯ ಭಾಷೆಗೆ ಮಹತ್ವ ನೀಡಿ ಕಟ್ಟಿಮನಿಯವರಂತ ಅನೇಕ ಕಾದಂಬರಿಕಾರರು ಕನ್ನಡದಲ್ಲಿ ರಚಿಸಿದ
ಅನೇಕ ಕೃತಿಗಳು ರಾಷ್ಟ್ರೀಯ ಭಾಷೆಯಲ್ಲಿ ಅನುವಾದಗೊಂಡು ಎಲ್ಲರೂ ಓದಲು ಸಹಾಯವಾಗುತ್ತದೆ ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾತ್ರ ಕಟ್ಟಿಮನಿಯವರ ಹೆಸರು ಗೊತ್ತು. ಆದರೆ ಅವರ ಕೃತಿಗಳು ಗೊತ್ತಿಲ್ಲ. ಹಾಗಾಗಿ ರಾಷ್ಟ್ರೀಯ ಭಾಷೆ ಸೇರಿದಂತೆ ಹಲವು ಭಾಷೆಯಲ್ಲಿ ಅವರ ಕೃತಿಗಳು ಬಿಡುಗಡೆಯಾಗಬೇಕು ಎಂದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ರಹಮತ್ ತರೀಕೆರೆ ಅವರು ಮಾತನಾಡಿ , ಮೂರು ಕರ್ನಾಟಕಗಳು ಇವೆ. ಕಟ್ಟಿಮನಿಯವರು ಮರಾಠಿ ಸಂಸ್ಕೃತಿಯ ಕರ್ನಾಟಕದವರು, ಅಮರೇಶ ನುಗಡೋಣಿ ಅವರು ತೆಲುಗು ಸಂಸ್ಕೃತಿಯ ಕರ್ನಾಟಕದವರು, ಕೃಷ್ಣಮೂರ್ತಿ ಹನೂರ ತಮಿಳು ಸಂಸ್ಕೃತಿಯ ಕರ್ನಾಟಕದವರು. ಹೀಗೆ ಮೂರು ಭಾಷೆಗಳಿಂದ ಬಂದ ಗೆಳೆಯರು ಒಂದು ಬಿಂದುವಿನಲ್ಲಿ ಸೇರಿದ್ದಾರೆ, ಅದು ಕನ್ನಡದಲ್ಲಿ. ಹೀಗಾಗಿ ಇದನ್ನು ಕನ್ನಡ ಸಾಹಿತ್ಯದ ವಿಶಿಷ್ಟತೆ ಎಂದರೆ ತಪ್ಪಾಗಲಾರದು ಎಂದರು.
ಪ್ರಶಸ್ತಿ ಪ್ರದಾನ:
೨೦೧೮ ನೇ ಸಾಲಿನ ಬಸವರಾಜ ಕಟ್ಟೀಮನಿ ಸಾಹಿತ್ಯ ಕಾದಂಬರಿ ಪ್ರಶಸ್ತಿಯನ್ನು ಡಾ. ಕೃಷ್ಣಮೂರ್ತಿ ಹನೂರ ಅವರಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಅರವಿಂದಮಿತ್ರ ಸ್ವೀಕರಿಸಿದರು.
೨೦೧೮ ನೇ ಸಾಲಿನ ಬಸವರಾಜ ಕಟ್ಟೀಮನಿ ಕಥಾಸಂಕಲನ ಸಾಹಿತ್ಯ ಪ್ರಶಸ್ತಿಯನ್ನು ಅಮರೇಶ ನುಗಡೋಣಿ ಅವರಿಗೆ ನೀಡಲಾಯಿತು.
೨೦೧೮ ನೇ ಸಾಲಿನ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯನ್ನು ದೂಪದ ಮಕ್ಕಳು ಎಂಬ ಕೃತಿಗೆ ಸ್ವಾಮಿ ಪೊನ್ನಾಚಿ ಅವರಿಗೆ ನೀಡಲಾಯಿತು.
ವಿನಾಯಕ ಮೋರೆ ಹಾಗೂ ಸಂಗಡಿಗರು ನಾಡಗೀತೆಯನ್ನು ಹಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಪ್ರೋ. ಚಂದ್ರಶೇಖರ್ ಅಕ್ಕಿ ಅವರು ವಂದಿಸಿದರು ಹಾಗೂ ಶಿರೀಷ ಜೋಶಿ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರೋ. ಧರಣೇಂದ್ರ ಕುರಕುರಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಮಲ್ಲಿಕಾರ್ಜುನ ಹಿರೇಮಠ, ಸರಜೂ ಕಾಟ್ಕಕರ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಡಾ. ರಾಮಕೃಷ್ಣ ಮರಾಠೆ, ಬಾಳಾಸಾಹೇಬ ಲೋಕಾಪೂರ, ಶಿವಕುಮಾರ್ ಕಟ್ಟಿಮನಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ