Election NewsKannada NewsKarnataka NewsPolitics

ರಿಯಲ್‌ ಹಿಟ್ಲರ್‌ ಎಂದರೆ ಅದು ಕಾಂಗ್ರೆಸ್‌ ಮಾತ್ರ: ಪ್ರತಿಪಕ್ಷ ನಾಯಕ ಆರ್‌ ಅಶೋಕ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಬಾಂಬ್‌ ಸ್ಫೋಟದ ತನಿಖೆಯನ್ನು ಕಾಂಗ್ರೆಸ್‌ ನಾಯಕರು,  ತಿರುಚಲು ಯತ್ನಿಸಿದ್ದಾರೆ. ಆದರೆ ಎನ್‌ಐಎ ತಂಡ ಸೂಕ್ತ ತನಿಖೆ ನಡೆಸಿರುವುದು ಅಭಿನಂದನೀಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಯಿಂದ ರಾಜ್ಯದ ಜನರು ಆತಂಕಗೊಂಡಿದ್ದರು. ಆದರೆ ಸೂಕ್ತ ಸಮಯದಲ್ಲೇ ಉಗ್ರರನ್ನು ಬಂಧಿಸಿ ಮುಂದಿನ ಅನಾಹುತಗಳನ್ನು ಎನ್‌ಐಎ ತಪ್ಪಿಸಿದೆ. ಇದಕ್ಕಾಗಿ ಎನ್‌ಐಎ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು. 

ಕಾಂಗ್ರೆಸ್‌ ನಾಯಕರು ಈ ಘಟನೆಯನ್ನು ತಿರುಚುವ ಕೆಲಸ ಮಾಡಿದ್ದರು. ಅಲ್ಪಸಂಖ್ಯಾತರಿಗೆ ನೋವಾದರೆ ಮತಬ್ಯಾಂಕ್‌ ತಪ್ಪುತ್ತದೆ ಎಂಬ ಕಾರಣಕ್ಕೆ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಇದು ವೈಯಕ್ತಿಕ, ವ್ಯಾಪಾರ ಸಂಬಂಧಿ ದ್ವೇಷ ಎನ್ನುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅದರಂತೆ ಪೊಲೀಸರು ಕೂಡ ನಡೆದುಕೊಂಡರು. ಹಿಂದೆ ಕುಕ್ಕರ್‌ ಸ್ಪೋಟ ಆದಗಾಲೂ ಮಧ್ಯಪ್ರವೇಶ ಮಾಡಿದ ಡಿ.ಕೆ  ಶಿವಕುಮಾರ್‌, ನನ್ನ ಬ್ರದರ್‌ ಎಂದಿದ್ದರು. ರಾಜ್ಯ ಸರ್ಕಾರ ಈ ರೀತಿ ನಿರ್ದೇಶನ ನೀಡಿದ್ದರಿಂದ ಪೊಲೀಸರಿಗೆ ಯಾವುದೆ ಸುಳಿವು ಸಿಗಲಿಲ್ಲ. ಆದರೆ ಎನ್‌ಐಎ ಬಂದ ಬಳಿಕ ಭಯೋತ್ಪಾದಕ ಚಟುವಟಿಕೆ ಬಯಲಾಗಿದೆ ಎಂದರು. 

ಕಾಂಗ್ರೆಸ್‌ನ ಸಹೋದರಿ ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲೇ ಭಯೋತ್ಪಾದಕರು ಸಿಕ್ಕಿದ್ದಾರೆ.  ಇಲ್ಲಿ ಬ್ರದರ್‌ಗಳಿದ್ದರೆ, ಅಲ್ಲಿ ಸಿಸ್ಟರ್‌ ಬಳಿಯೇ ಉಗ್ರರು ಸಿಕ್ಕಿದ್ದಾರೆ. ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ ಸುರಕ್ಷಿತವಾದ ಸ್ಥಳವಾಗಿದೆ. ಎನ್‌ಐಎ ತಂಡ ಸಾಯಿ ಪ್ರಸಾದ್‌ ಎಂಬುವರನ್ನು ತನಿಖೆಗೆ ಕರೆದರೆ ಸಚಿವ ದಿನೇಶ್‌ ಗುಂಡೂರಾವ್‌ ಅದನ್ನೇ ಹಿಡಿದುಕೊಂಡು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಸಾಯಿ ಪ್ರಸಾದ್‌ ಸಾಕ್ಷಿಯಾಗಿ ಹೋಗಿದ್ದು, ಅವರ ವಿವರವನ್ನು ಎಲ್ಲರ ಮುಂದೆ ಕಾಂಗ್ರೆಸ್‌ನವರು ಬಹಿರಂಗ ಮಾಡಿದ್ದಾರೆ. ದೇಶದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ. ಲೂಟಿ ಹೊಡೆಯಲು ಇನ್ನೊಂದು ದೇಶ ಕಟ್ಟಬೇಕು ಎಂಬ ಆಶಯ ಇವರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದ ದೇಶದ್ರೋಹಿ ಘಟನೆಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ತಿರುಚಲು ಯತ್ನಿಸಿದ್ದರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಕೂಡ ಭಯೋತ್ಪಾದಕ ಘಟನೆಯಂತೆಯೇ ಇತ್ತು. ಸಂಪತ್‌ ರಾಜ್‌ ಜೈಲಿಗೆ ಹೋಗಿ ಬಂದರೂ ಮಂಡಳಿಯ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಆದರೆ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದರೂ ಕ್ರಮ ಕೈಗೊಳ್ಳಲಿಲ್ಲ ಎಂದರು. 

ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಲಾಗುತ್ತಿದೆ. ಹಿಟ್ಲರ್‌, ಸರ್ವಾಧಿಕಾರಿ ಎಂದು ಟೀಕೆ ಮಾಡುವವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಈ ದೇಶದಲ್ಲಿ ರಿಯಲ್‌ ಹಿಟ್ಲರ್‌ ಎಂದರೆ ಅದು ಕಾಂಗ್ರೆಸ್‌ ಮಾತ್ರ. ತುರ್ತು ಪರಿಸ್ಥಿತಿ ಹೇರಿ ಎಲ್ಲರನ್ನೂ ಜೈಲಿಗಟ್ಟುವ ಕೆಲಸವನ್ನು ಇಂದಿರಾಗಾಂಧಿ ಮಾಡಿದ್ದರು. ವಿಶ್ವವೇ ಒಪ್ಪಿಕೊಂಡ ನರೇಂದ್ರ ಮೋದಿಯವರನ್ನು ಹಿಟ್ಲರ್‌ಗೆ ಹೋಲಿಸುವ ಕಾಂಗ್ರೆಸ್‌ ಇನ್ನೂ ಬ್ರಿಟಿಷ್‌ ಮನಸ್ಥಿತಿಯಲ್ಲೇ ಇದೆ ಎಂದು ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button