ರೈತರ ಬದುಕನ್ನು ಮತ್ತೆ ಕಟ್ಟಿಕೊಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಅತಿವೃಷ್ಠಿಯಿಂದಾಗಿ ಬರ್ಬರವಾಗಿರುವ ರೈತರ ಬದುಕನ್ನು ಮತ್ತೆ ಕಟ್ಟಿಕೊಡುವಂತೆ ಆಗ್ರಹಿಸಿ, ಭಾರತೀಯ ಕೃಷಿಕ ಸಮಾಜ(ಸಂಯುಕ್ತ)ದ ವತಿಯಿಂದ ಹಲವಾರು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರ ನೇತೃತ್ವದಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬೂದೆಪ್ಪ ಅವರಿಗೆ ಈ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿದ ಮೋದಗಿ ಅವರು, ನೆರೆಯಿಂದ ರೈತರಿಗೆ ಆಗಿರುವ ಸಂಕಷ್ಟಗಳು ಹಾಗೂ ಆಗಬೇಕಾಗಿರುವ ಕಾಮಗಾರಿಗಳು, ಪರಿಹಾರದ ಬಗ್ಗೆ ವಿವರಿಸಿದರು.
ಪ್ರಮುಖ ಬೇಡಿಕೆಗಳು:
ಪ್ರವಾಹ ಪೀಡಿತ ಈ ಭಾಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡಬೇಕು. ಪ್ರವಾಹದಿಂದ ಮನೆಕಳೆದುಕೊಂಡವರಿಗೆ ಸರಕಾರವೇ ಪೂರ್ಣ ವೆಚ್ಚ ಮನೆಗಳನ್ನು ನಿರ್ಮಿಸಿಕೊಡಬೇಕು. ನೆರೆಯ ಹಾನಿಯ ಬಗ್ಗೆ ವಯಕ್ತಿಕ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು.
ನೆರೆಯಲ್ಲಿ ದಾಖಲೆಗಳು ಕೊಚ್ಚಿಹೋಗಿರುವದರಿಂದ ಸುಲಭವಾಗಿ ಮತ್ತೆ ಸಿಗುವ ದಾಖಲೆಗಳನ್ನು ಮಾತ್ರ ಪರಿಗಣಿಸಬೇಕು. ಎಕರೆಗೆ ಕನಿಷ್ಠ 50 ಸಾವಿರ ಮತ್ತು ಜೀವಹಾನಿಗೆ 25 ಲಕ್ಷ ರೂ. ಹಾಗೂ ಜಾನುವಾರುಗಳ ಹಾನಿಗೆ 2 ಲಕ್ಷ ರೂ. ಪರಿಹಾರ ನೀಡಬೇಕು. ಈ ಬಗ್ಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಬೇಕು.
ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಪಡಿತರ ಚೀಟಿ, ಆಧಾರ ಕಾರ್ಡ್, ಮಾಶಾಸನ ದಾಖಲೆ, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಹಾಗೂ ಪಹಾಣಿಪತ್ರಗಳನ್ನು ತಕ್ಷಣ ಒದಗಿಸಬೇಕು. ಹಿಂಗಾರಿನ ಮಳೆ ಅಭಾವ ಮತ್ತು ಮುಂಗಾರಿನ ನೆರೆಯ ಹಾವಳಿಯಿಂದ ಹಾನಿಗೊಳಗಾಗಿರುವ ಬೆಳೆಗಳ ಸಮೀಕ್ಷೆಗಾಗಿ ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ತೆರಳಿ ವಾಸ್ತವಿಕ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ವೈಜ್ಞಾನಿಕ ವರದಿ ನೀಡಬೇಕು.
ಬೆಳೆ ನಷ್ಟದಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವದರಿಂದ ಕೂಡಲೆ ಸರಕಾರ ಮೇವಿನ ಕೊರತೆ ನೀಗಿಸಬೇಕು. ನದಿ ಪಾತ್ರದ ಜನರ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮತ್ತು ವಿಶೇಷ ಪ್ಯಾಕೇಜ್ ಘೋಷಿಸಬೇಕು.
ನೆರೆಯಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿವೆ. ಕೆಲ ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿವೆ. ವಿದ್ಯುತ್ ಅವಘಡ ಸಂಭವಿಸುವ ಅಪಾಯವಿರುವದರಿಂದ ಕೂಡಲೇ ದುರುಸ್ತಿ ಕಾರ್ಯ ಆರಂಭಿಸಬೇಕು. ವಿದ್ಯುತ್ ಅನುಕೂಲತೆ ಕಲ್ಪಿಸಬೇಕು.
ಪ್ರವಾಹ ಪೀಡಿತ ಗ್ರಾಮಗಳ ರೈತರಿಗೆ ಹಿಂಗಾರು ಬಿತ್ತನೆಗಾಗಿ ಬೀಜ, ಗೊಬ್ಬರ, ಔಷಧಗಳನ್ನು ಉಚಿತವಾಗಿ ಪೂರೈಸಬೇಕು. ಹಾನಿಗೊಳಗಾಗಿರುವ ರೈತರ ಪಂಪ್‍ಸೆಟ್‍ಗಳನ್ನು. ಮೋಟಾರಗಳನ್ನು. ಹಾಗೂ ಬಾವಿಗಳನ್ನು ಸರಕಾರವೇ ದುರುಸ್ತಿ ಮಾಡಿಕೊಡಬೇಕು. ಸಂಪೂರ್ಣ ರಿಯಾಯತಿಯಲ್ಲಿ ಹನಿ ನೀರಾವರಿ ಸೌಲಭ್ಯ ಒದಗಿಸಬೇಕು. ರೈತರ ಹೊಲಗಳಲ್ಲಿಯ ಮನೆಗಳು, ದನದ ಕೊಟ್ಟಿಗೆಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸಿ, ಮತ್ತೆ ನಿರ್ಮಿಸಿಕೊಡಬೇಕು.
ಬಳ್ಳಾರಿ ನಾಲಾ ವ್ಯಾಪ್ತಿಯಲ್ಲಿ ಪ್ರವಾಹಕ್ಕೆ ಸಿಲುಕಿ ಭೂಮಿಯಲ್ಲಿಯ ಮಣ್ಣು ಕೊಚ್ಚಿಕೊಂಡು ಹೋಗಿ ರೈತನ ಭೂಮಿಯು ನೈಜ್ ಸ್ಥಿತಿಯನ್ನು ಕಳೆದುಕೊಂಡಿದೆ. ಹಾನಿಯಾದ ಭೂಮಿಯನ್ನು ಸರಕಾರವೇ ಅಭಿವೃದ್ದಿ ಪಡಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಆಲಿಸಿದ ಬೂದೆಪ್ಪ ಅವರು, ಜಿಲ್ಲಾಡಳಿತದಿಂದ ಆಗಬೇಕಾಗಿರುವ ಕಾಮಗಾರಿಗಳನ್ನು ಮಾಡುವದಾಗಿ ಹಾಗೂ ಸರಕಾರದಿಂದ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಪ್ರಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಗೌರವಾಧ್ಯಕ್ಷ ಜಯಪ್ಪ ಬಸರಕೋಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಮರಲಿಂಗಣ್ಣವರ, ಜಿಲ್ಲಾಧ್ಯಕ್ಷ ದುಂಡಯ್ಯ ಪೂಜಾರ, ದುಂಡನಗೌಡ ಪಾಟೀಲ, ಸಂತೋಷ ರುದ್ರಪ್ಪಗೋಳ, ಗಂಗಾಧರ ಪಾಟೀಲ, ನಿರ್ವಾಣಿ ಶಿರೂರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ