Kannada NewsKarnataka NewsLatest

ಬೆಳಗಾವಿಯಲ್ಲಿ ಮತ್ತೊಂದು ಕಚೇರಿ ಸ್ಥಾಪನೆಗೆ ಶಿಫಾರಸ್ಸು: 10 ವರ್ಷಗಳ ಹೋರಾಟಕ್ಕೆ ಯಶಸ್ಸು ಸನ್ನಿಹಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಲು ಪ್ರಾಧಿಕಾರವು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ತೆರೆಯಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಸರಕಾರದ ಮೇಲೆ ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸೆಪ್ಟಂಬರ್ ೧೩ ರ ರಂದು ಬೆಂಗಳೂರಿನಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ಸಂಬಂಧ ನಿರ್ಣಯವನ್ನು ಕೈಕೊಳ್ಳಲಾಗಿದೆ.
ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಅವರು ಈ ಸಂಬಂಧ ಮಂಡಿಸಿದ ಪ್ರಸ್ತಾವನೆಯನ್ನು ಒಪ್ಪಿದ ಪ್ರಾಧಿಕಾರವು ಸರಕಾರಕ್ಕೆ ಶಿಫಾರಸು ಮಾಡಲು ಸಮ್ಮತಿಸಿದೆ. ಪ್ರಾಧಿಕಾರವು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಗಡಿ ಭಾಗದ ಪ್ರದೇಶಗಳಿಂದ ಆಗಮಿಸುವ ಜನರಿಗೆ ಅಹ್ವಾಲುಗಳನ್ನು ಸಲ್ಲಿಸಲು ತುಂಬಾ ತೊಂದರೆಯಾಗುತ್ತಿದೆ. ಎರಡನೇ ರಾಜಧಾನಿಯೆಂದು ಕರೆಯಲ್ಪಡುವ ಬೆಳಗಾವಿಯಲ್ಲಿ ಮೊದಲನೇ ಪ್ರಾದೇಶಿಕ ಕಚೇರಿಯನ್ನು ಆರಂಭಿಸಿ ನಂತರದ ದಿನಗಳಲ್ಲಿ ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಆರಂಭಿಸುವ ಬಗ್ಗೆ ಸರಕಾರವನ್ನು ಕೋರಬಹುದಾಗಿದೆಯೆಂದು ಅಶೋಕ ಚಂದರಗಿ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ ನಂತರ ಈ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿತು.
ಗಡಿಗೆ ಸಂಬಂಧಿಸಿದ ಆಯೋಗ ಮತ್ತು ಪ್ರಾಧಿಕಾರಗಳು ಬೆಳಗಾವಿಯಿಂದಲೇ ಕಾರ್ಯನಿರ್ವಹಿಸಬೇಕೆಂಬ ಗಡಿ ಭಾಗದ ಕನ್ನಡಿಗರಿಗೆ ದೊರೆತ ಮೊದಲ ವಿಜಯವಾಗಿದೆಯೆಂದು ಅಶೋಕ ಚಂದರಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button