*ಇನ್ಮುಂದೆ ಭಾನುವಾರವೂ ತೆರೆದಿರಲಿದೆ ರಿಜಿಸ್ಟ್ರಾರ್, ಸಬ್ ರಿಜಿಸ್ಟ್ರಾರ್ ಕಚೇರಿ*
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕಾಗಿ ಪ್ರಾಯೋಗಿಕವಾಗಿ ಮೊದಲನೇ ಹಂತದಲ್ಲಿ ಮಾರ್ಚ್ 2024 ರಿಂದ ಪ್ರಾರಂಭಿಸುತ್ತಾ ಬೆಂಗಳೂರು ನಗರ ಜಿಲ್ಲೆಯ 5 ನೋಂದಣಿ ಜಿಲ್ಲೆಗಳಲ್ಲಿ ಪತಿ ಒಂದು ನೋಂದಣಿ ಜಿಲ್ಲೆಯಲ್ಲಿ ಒಂದು ಉಪ ನೋಂದಣಿ ಕಛೇರಿಯು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳ ಪೈಕಿ ಯಾವುದಾದರೂ ಒಂದು ಉಪ ನೋಂದಣಿ ಕಛೇರಿ ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರ ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಆ ವಾರದ ಮಂಗಳವಾರದ ದಿನದಂದು ಸದರಿ ಕಛೇರಿಯು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಲಾಗಿದೆ.
ಇದೇ ರೀತಿ ಪ್ರಾಯೋಗಿಕವಾಗಿ ಏಪ್ರಿಲ್ ಮಾಹೆಯಿಂದ ರಾಜ್ಯದ ಬೆಂಗಳೂರು ನಗರ ನೋಂದಣಿ ಜಿಲ್ಲೆಗಳು ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿ ಜಿಲ್ಲೆಯು ಸೇರಿದಂತೆ ರಾಜ್ಯದ ಇತರೆ ಎಲ್ಲಾ ನೋಂದಣಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಿ ಕಛೇರಿಗಳಲ್ಲಿ ಒಂದು ಉಪ ನೋಂದಣಿ ಕಛೇರಿಯನ್ನು ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರ ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಸದರಿ ಕಛೇರಿಗಳಿಗೆ ಆ ವಾರದ ಮಂಗಳವಾರ ದಿನದಂದು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಿದೆ.
ನೋಂದಣಿ ಜಿಲ್ಲೆಯ ಉಪ ನೋಂದಣಿ ಕಛೇರಿಗಳ ಪೈಕಿ ಭಾನುವಾರದಂದು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಉಪ ನೋಂದಣಿ ಕಛೇರಿಯ ವಿವರಗಳನ್ನು ಈ ಕೂಡಲೇ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಸಾರ್ವಜನಿಕರ ಮಾಹಿತಿಗಾಗಿ ಅವರ ಕಛೇರಿಯ ಅಧಿಕೃತ ಜಾಲತಾಣದಲ್ಲಿ ಹಾಗೂ ಕಾವೇರಿ-2 ಜಾಲತಾಣದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವುದು. ಅಲ್ಲದೆ ಭಾನುವಾರದಂದು ಕಾರ್ಯನಿರ್ವಹಿಸುವ ಉಪ ನೋಂದಣಿ ಕಛೇರಿಗಳಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಿಕೊಳ್ಳಲು ಸಾರ್ವಜನಿಕರು ಅನುಕೂಲಕರ ಸಮಯವನ್ನು ನಿಗದಿಪಡಿಸಿಕೊಳ್ಳಲು ಕಾವೇರಿ-2 ತಂತ್ರಾಂಶದಲ್ಲಿ ಸೂಕ್ತ ಪಾರದರ್ಶಕ ಅವಕಾಶಗಳನ್ನು ಕಲ್ಪಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಅವಶ್ಯಕ ಕ್ರಮ ಕೈಗೊಳ್ಳುವುದು.
ಈ ಜನಸ್ನೇಹಿ ಆಡಳಿತ ಸುಧಾರಣೆಯನ್ನು ಯಾವುದೇ ಗೊಂದಲವಿಲ್ಲದೆ ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಿಗೆ ಸೂಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ