Belagavi NewsBelgaum NewsElection NewsKannada NewsKarnataka NewsPolitics

ಮೋದಿ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದು, ಆದರೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಗ್ಯಾರಂಟಿಗಳನ್ನು ನೀಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಟೀಕಿಸಿದ ಪ್ರಧಾನಿ ಮೋದಿ ಅವರು ಚುನಾವಣೆ ಗೆಲುವಿಗಾಗಿ ಪ್ರಚಾರ ಸಭೆಯಲ್ಲಿ ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಆದರೆ ಜನತೆಗೆ ಎಷ್ಟು ಗ್ಯಾರಂಟಿಗನ್ನು ನೀಡಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಜನಕ್ಕೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡುತ್ತಿದ್ದೇವೆ. ಕಾರಣ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿಯವರ ಆರೋಪ ಶುದ್ದ ಸುಳ್ಳು ಎಂದು ತಿಳಿಸಿದರು.

ಚಿಕ್ಕೋಡಿ ಲೋಕಸಭೆ ಚುನಾವಣೆಗೆ ಸಂಬಧಿಸಿದಂತೆ ಮಾತನಾಡಿದ ಸಚಿವ ಸತೀಶ್‌, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾಸಾಬ್ ಜೊಲ್ಲೆ ಬಗ್ಗೆ ಅಸಮಾಧಾನ ಇರುವ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ ಎಂದ ಅವರು, ನಾವು ಚುನಾವಣೆ ಬಂದಾಗ ಅಷ್ಟೇ ಕೆಲಸ ಮಾಡುವುದಿಲ್ಲ. ನಿರಂತರವಾಗಿ ಜನರೊಂದಿಗೆ ಇರುತ್ತೇವೆ. ವಾರಕ್ಕೊಮ್ಮೆ ಭೇಟಿ ನೀಡಿ ಕಾರ್ಯಕರ್ತರಿಗೆ ಸ್ಪಂದಿಸುತ್ತೇವೆಂದು ತಿಳಿಸಿದರು.

ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ನಾಮಪತ್ರ ಸಲ್ಲಿಸುವ ಕುರಿತು ಮಾತನಾಡಿದ ಅವರು, ನಾವು ಮೊದಲಿಂದಲೂ ನಾಲ್ಕೈದು ಜನ ಮಾತ್ರ ನಾಮಪತ್ರ ಸಲ್ಲಿಸುತ್ತಾ ಬಂದಿದ್ದು, ಪ್ರಿಯಾಂಕಾ ಜಾರಕಿಹೊಳಿ ಅವರ ನಾಮಪತ್ರ ಸಲ್ಲಿಸಲು ವೇಳೆ ಹಳೆ ರೂಢಿಯನ್ನೇ ಮುಂದುವರಿಸುತ್ತೇವೆ ಎಂದರು.

ನಾಮಪತ್ರ ಯಾವಾಗ ಸಲ್ಲಿಸಬೇಕೆಂದು ಇನ್ನೂ ನಿರ್ಧರಿಸಿಲ್ಲ. ಜಿಲ್ಲೆಯ ಎಲ್ಲಾ ಮುಖಂಡರೊಡನೆ ಚರ್ಚಿಸಿ ಯಾವಾಗ ನಾಮಪತ್ರ ಸಲ್ಲಿಸಬೇಕೆನ್ನುವುದನ್ನು ತಿಳಿಸುತ್ತೇನೆ ಎಂದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿಗಳು ಚುನಾವಣೆಯಲ್ಲಿ ಖಂಡಿತ ಪರಿಣಾಮ ಬೀರುತ್ತವೆ. ನಮ್ಮ ಪಕ್ಷದ ಅಭಿವೃದ್ಧಿ, ಗ್ಯಾರಂಟಿ, ಕಳೆದ ಮೂವತ್ತು ವರ್ಷದಲ್ಲಿ ನಾವು ಜನಕ್ಕೆ ನೀಡಿದ ಸೇವೆಯನ್ನು ಆಧರಿಸಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಪ್ರಿಯಂಕಾ ಜಾರಕಿಹೊಳಿ ಗೆಲ್ಲುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲುತ್ತಾರೆ ಎಂದು ಮಾತ್ರ ಹೇಳಬಹುದು, ಆದರೆ ಇಷ್ಟೇ ಅಂತರದಿಂದ ಗೆಲ್ಲುತ್ತಾರೆ ಎಂದು ಈಗಲೇ ಹೇಳಲು ಆಗಲ್ಲ. ಇನ್ನು ಮೂವತ್ತು ದಿನಗಳ ನಂತರ ಚುನಾವಣೆ ಇದ್ದು, ನಮ್ಮ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುವುದರ ಮೇಲೆ ಗೆಲುವಿನ ಲೆಕ್ಕಾಚಾರ ಆಧರಿಸುತ್ತದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಕೃಷ್ಣಾ ನದಿಗೆ ಹಿಡಕಲ್ ಡ್ಯಾಮ್ ಮೂಲಕ ಒಂದು ಟಿಎಂಸಿ ನೀರು ಹರಿಸಲು ಚರ್ಚೆ ಮಾಡಿದ್ದೇನೆ. ಕೃಷ್ಣಾ ನದಿಗೆ ನೀರು ಹರಿಸಿದರೆ ಮಾಂಜರಿ, ಕುಡಚಿ, ಅಥಣಿಗೆ ನೀರು ತಲುಪಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದರು.

*ಬಿಜೆಪಿಯ ಯಾವುದೇ ತಂತ್ರ ನಡೆಯುವುದಿಲ್ಲ: ಚನ್ನರಾಜ*

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಸಚಿವರು ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.‌ ಎರಡೂ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಒಳ್ಳೆಯ ಅಭಿಪ್ರಾಯ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯಾವುದೇ ತಂತ್ರ ನಡೆಯುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಚಿಕ್ಕೋಡಿ ಹಾಗೂ ಬೆಳಗಾವಿ ಎರಡೂ ಕ್ಷೇತ್ರ ಕಾಂಗ್ರೆಸ್ ವಶವಾಗುತ್ತದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. 

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಮುಖಂಡರಾದ ರಾಜೇಂದ್ರ ಪಾಟೀಲ್‌, ರಾಜದೀಪ್‌ ಕೌಜಲಗಿ, ಪರಶುರಾಮ ಢಗೆ, ಸಿದ್ದಿಕಿ ಅಂಕಲಗಿ, ಮಂಜು ಕಾಂಬಳೆ, ಅಬೀಬ್‌ ಶಿಲ್ಲೇದಾರ್‌ ಸೇರಿದಂತೆ ಅನೇಕರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button