ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿದ್ದ ರೆಮ್ ಡಿಸಿವಿರ್ ಔಷಧ ಕಾಳದಂಧೆಕೋರರಿಗೆ ಕಡಿವಾಣ ಹಾಕಿರುವ ರಾಜ್ಯ ಸರ್ಕಾರ, ಇನ್ಮುಂದೆ ರೆಮ್ ಡಿಸಿವಿರ್ ಹಂಚಿಕೆಯಾಗುತ್ತಿದ್ದಂತೆ ಸೋಂಕಿತ ವ್ಯಕ್ತಿಗೆ ಸಂದೇಶ ಬರುವ ತಂತ್ರಜ್ಞಾನ ರೂಪಿಸಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ರೆಮ್ ಡೆಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದ್ದು, ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂದು SMS ಕಳುಹಿಸಲಾಗುತ್ತದೆ. ಸಾರ್ವಜನಿಕರು ಈ https://covidwar.karnataka.gov.in/service2 ಲಿಂಕ್ ಮೂಲಕ ತಮಗೆ ಹಂಚಿಕೆಯಾಗಿರುವ ಔಷಧದ ಬಗ್ಗೆ ಮಾಹಿತಿ ಪಡೆಯಬಹುದು ಎಂದಿದ್ದಾರೆ.
ಅಷ್ಟೇ ಅಲ್ಲ ಒಂದು ವೇಳೆ ಸೋಂಕಿತ ವ್ಯಕ್ತಿಯ SRF IDಗೆ ರೆಮ್ ಡಿಸಿವಿರ್ ಔಷಧ ಹಂಚಿಕೆಯಾಗಿ ಆಸ್ಪತ್ರೆ ಅದನ್ನು ಆ ವ್ಯಕ್ತಿಯ ಚಿಕಿತ್ಸೆಗೆ ಒದಗಿಸದಿದ್ದಲ್ಲಿ ಇದೇ ಲಿಂಕ್ ಮೂಲಕ ಸರ್ಕಾರಕ್ಕೆ ವರದಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪಾರದರ್ಶಕ ವ್ಯವಸ್ಥೆಯಿಂದ ಕಾಳಸಂತೆ ಮಾರಾಟಕ್ಕೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ