Film & EntertainmentKannada NewsLatestWorld

*ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕ ಸಿಂಗೀತಂ ಶ್ರೀನಿವಾಸ ರಾವ್ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರು 60ಕ್ಕೂ ಅಧಿಕ ಸಿನಿಮಾಗಳಿಗೆ ನಿರ್ದೇಶನ ನೀಡಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ‘ಆನಂದ್’ ಸಿನಿಮಾ ಮೂಲಕ ಶಿವರಾಜ್‌ಕುಮಾರ್ ಅವರನ್ನು ನಾಯಕನಾಗಿ ಪರಿಚಯಿಸಿದ ಹೆಗ್ಗಳಿಕೆ ಅವರದ್ದು. ‘ಹಾಲು ಜೇನು’, ‘ದೇವತಾ ಮನುಷ್ಯ’ ಸೇರಿದಂತೆ ಹಲವು ಯಶಸ್ವಿ ಕನ್ನಡ ಸಿನಿಮಾಗಳಿಗೆ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಕೂಡ ಅವರ ನಿರ್ದೇಶನದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ.

1931ರ ಸೆಪ್ಟೆಂಬರ್ 21ರಂದು ಜನಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ನಿರ್ಮಾಣ ಹಾಗೂ ಸಂಗೀತ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು. ಡಾ. ರಾಜ್‌ಕುಮಾರ್, ಕಮಲ್ ಹಾಸನ್, ಬಾಲಕೃಷ್ಣ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ಅವರು ಕೆಲಸ ಮಾಡಿದ್ದರು.

ತೆಲುಗು ಚಿತ್ರರಂಗದಲ್ಲಿ ‘ಆದಿತ್ಯ 369’, ‘ಭೈರವ ದ್ವೀಪ’ ಸೇರಿದಂತೆ ಹಲವು ಗಮನಾರ್ಹ ಸಿನಿಮಾಗಳನ್ನು ನೀಡಿರುವ ಅವರು, ವಿಭಿನ್ನ ಕಥೆಗಳನ್ನು ಹೊಸತನದೊಂದಿಗೆ ತೆರೆಗೆ ತರುವ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.

94ನೇ ವಯಸ್ಸಿನಲ್ಲಿಯೂ ಸಿನಿಮಾ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯಿಂದ ಭಾರತೀಯ ಸಿನಿಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button