
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ ಎರಡುವರೆ ತಿಂಗಳಿಂದ ಮುಚ್ಚಲ್ಪಟ್ಟಿದ್ದ ದೇವಾಲಯ, ಮಠ, ಮಂದಿರ ಚರ್ಚ್ ಮಸೀದಿ ಬಾಗಿಲುಗಳು ಇಂದಿನಿಂದ ತೆರೆದಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನಗಳ ಬಾಗಿಲು ತೆರೆದಿದ್ದು, ರಾಜ್ಯದ ಎಲ್ಲ ಪ್ರಸಿದ್ಧ ದೇವಾಲಯಗಳಲ್ಲಿ ಭಕ್ತರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ಗಳನ್ನು ಮಾಡಲಾಗಿದೆ. ದೇವರ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ದೇಗುಲದಲ್ಲಿ ಮೊದಲ ದಿನವೇ ನೂರಾರು ಭಕ್ತರ ಆಗಮಿಸಿ ಮಾದೇಶ್ವರನ ದರ್ಶನ ಪಡೆದು, ಉಘೇ ಉಘೇ ಮಾದಪ್ಪ ಜಯಘೋಷ ಮೊಳಗಿಸಿದರು. ದೇಗುಲಕ್ಕೆ ಬಂದ ಪ್ರತಿಯೊಬ್ಬ ಭಕ್ತರಿಗೂ ಥರ್ಮಲ್ ಸ್ಕ್ರೀನಿಂಗ್, ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಇಲ್ಲದವರಿಗೆ ಕಡಿಮೆ ದರದಲ್ಲಿ ಪ್ರಾಧಿಕಾರದ ವತಿಯಿಂದಲೇ ಮಾಸ್ಕ್ ವಿತರಿಸಲಾಗುತ್ತಿದೆ.
ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಇಂದಿನಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳಿಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಅರ್ಚಕರು ಸಹ ಮಾಸ್ಕ್ ಧರಿಸಿ ಪೂಜೆ ನೆರವೇರಿಸುತ್ತಿದ್ದಾರೆ.
ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಾಲಯ 9 ಗಂಟೆಗೆ ಬಾಗಿಲು ತೆರೆದಿದೆ. ಇನ್ನು ಮಂಗಳೂರಿನಾದ್ಯಂತ ಇಂದು ದೇವಸ್ಥಾನಗಳು ಓಪನ್ ಆಗಿವೆ. ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಗಣಪತಿ ದೇವಸ್ಥಾನ ಮತ್ತು ಮಂಗಳಾದೇವಿ ದೇವಸ್ಥಾನ ಓಪನ್ ಆಗಿವೆ. ಬೆಳಗ್ಗೆ 6 ಗಂಟೆಯಿಂದ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಓಪನ್ ಆಗಿದ್ದು, ಬೆಳಗ್ಗೆಯಿಂದಲೂ ಭಕ್ತರು ಸರದಿ ಸಾಲಲ್ಲಿ ನಿಂತು ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ.