Film & EntertainmentKannada NewsKarnataka NewsLatest

*ರೇಣುಕಾಸ್ವಾಮಿ ಕೊಲೆ ಪ್ರಕರಣ*: *ಪ್ರದೋಷ್ ಅರ್ಜಿಗೆ ದರ್ಶನ್ ಪರ ವಕೀಲರ ವಿರೋಧ!*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಂದೆಯ ವಾರ್ಷಿಕ ಪುಣ್ಯಕಾರ್ಯ ನೆರವೇರಿಸಲು ಜಾಮೀನು ನೀಡಬೇಕೆಂಬುದು ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಎರಡೂ ಕಡೆಯ ವಕೀಲರ ನಡುವೆ ವಾದ-ಪ್ರತಿವಾದಗಳು ಜೋರಾಗಿ ನಡೆದಿವೆ.

ಮಾಫಿ ಸಾಕ್ಷಿಯಾಗಿರುವ ವ್ಯಕ್ತಿಗೆ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹಷ್ಮತ್ ಪಾಷಾ ವಾದಿಸಿದ್ದಾರೆ. ಸಾಕ್ಷ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ ಮುಗಿಯುವವರೆಗೂ ಜೈಲಿನಲ್ಲೇ ಇರಬೇಕು ಎಂಬ ಕಟ್ಟುನಿಟ್ಟಿನ ಷರತ್ತಿನೊಂದಿಗೆ ನ್ಯಾಯಾಲಯ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ಈಗ ಜಾಮೀನು ನೀಡಿದರೆ ನ್ಯಾಯಾಲಯ ವಿಧಿಸಿರುವ ಷರತ್ತುಗಳು ನಿಷ್ಪಲವಾಗುತ್ತವೆ ಎಂದು ವಾದ ಮಂಡಿಸಿದ್ದಾರೆ.

ಪ್ರದೋಷ್ ಮೇಲೆ ಈಗಾಗಲೇ ಒತ್ತಡ ಮತ್ತು ಪ್ರಭಾವ ಬೀರಲಾಗಿದೆ ಎಂಬ ಆರೋಪವಿದೆ ಎಂದು ದರ್ಶನ್ ಪರ ವಕೀಲರು ಉಲ್ಲೇಖಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರದೋಷ್‌ಗೆ ಬೆಂಗಾವಲು ನೀಡಬಾರದೆಂದು ನ್ಯಾಯಾಲಯ ಆದೇಶಿಸಿರುವ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಒಂದು ದಿನದ ಮಟ್ಟಿಗೂ ಜಾಮೀನು ನೀಡಬಾರದು, ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸಬಾರದು ಎಂದು ಮನವಿ ಮಾಡಿದ್ದಾರೆ. ಜಾಮೀನು ನೀಡಿದರೆ ಇತರ ಆರೋಪಿಗಳೂ ಇದೇ ರೀತಿಯ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವಾದಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರದೋಷ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರದೋಷ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿರೋಧಿಸುವ ಹಕ್ಕು ದರ್ಶನ್‌ಗೆ ಇಲ್ಲ ಎಂದು ವಾದಿಸಿದ್ದಾರೆ. ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಕಾರ ತಂದೆಯ ಪುಣ್ಯಕಾರ್ಯ ಸೇರಿದಂತೆ ಅಂತಿಮ ವಿಧಿವಿಧಾನಗಳನ್ನು ಪುತ್ರನೇ ನೆರವೇರಿಸಬೇಕಾಗುತ್ತದೆ ಎಂದು ತಿಳಿಸಿ, ಮಾನವೀಯ ದೃಷ್ಟಿಯಿಂದ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದೆ. ಪ್ರದೋಷ್‌ಗೆ ಮಧ್ಯಂತರ ಜಾಮೀನು ಸಿಗುತ್ತದೆಯೇ ಅಥವಾ ಜೈಲಿನಲ್ಲೇ ಮುಂದುವರಿಯಬೇಕಾಗುತ್ತದೆಯೇ ಎಂಬುದು ಮುಂದಿನ ವಿಚಾರಣೆಯಲ್ಲಿ ನಿರ್ಧಾರವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button