*ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಮುರ್ಮು: ಕಣ್ಮನಸೆಳೆದ ಪಥಸಂಚಲನ; ಸೇನಾಶಕ್ತಿಯ ಅನಾವರಣ*

ಪ್ರಗತಿವಾಹಿನಿ ಸುದ್ದಿ: 77ನೇ ಗಣರಾಜ್ಯೋತ್ಸವದ ಸಡಗರ-ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಮೂರು ಸೇನಾ ಮುಖ್ಯಸ್ಥರು, ಅತಿಥಿಯಾಗಿ ಆಗಮಿಸಿರುವ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್, ಗಣ್ಯಾತಿಗಣ್ಯರು ಉಪಸ್ಥಿತಿರಿದ್ದರು.
ಈ ವರ್ಷದ ಗಣರಾಜ್ಯೋತ್ಸವವು ವಂದೇಮಾತರಂ ಗೀತೆಯ 150ನೇ ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಪಥಸಂಚಲನ ಕಣ್ಮನ ಸೆಳೆಯುತ್ತಿದ್ದು, ಭಾರತದ ಸಾಂಸ್ಕೃತಿಕ ಮತ್ತು ಸೇನಾಶಕ್ತಿ ಅನಾವರಣಗೊಂಡಿದೆ.

ಪಥಸಂಚಲನದಲ್ಲಿ ಆಪರೇಷನ್ ಸಿಂಧೂರ್ ರಚನೆಯನ್ನು ವಾಯುಪಡೆ ಪ್ರದರ್ಶಿಸುತ್ತಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿದೆ. ಇದರಲ್ಲಿ ಎರಡು ರಫೇಲ್ ಜೆಟ್ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಪಥಸಂಚಲನದಲ್ಲಿ 30 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ.
‘ಸ್ವಾತಂತ್ರ್ಯದ ಮಂತ್ರ, ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ, ಆತ್ಮನಿರ್ಭರ ಭಾರತ’ ಎಂಬುದು ಈ ಬಾರಿಯ ಮುಖ್ಯ ಥೀಮ್ಗಳಾಗಿವೆ.



