ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭೀಮಗಡ ಅಭಯಾರಣ್ಯದ ಹೆಮ್ಮಡಗಾ ಪ್ರಕೃತಿ ಶಿಬಿರವನ್ನು ಅರಣ್ಯ ಇಲಾಖೆಗೆ ಪುನಃ ಹಸ್ತಾಂತರಿಸುವ ಕುರಿತುಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿರವರು ಅರಣ್ಯ ಸಚಿವ ಈಶ್ವರ ಖಂಡ್ರೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಏಕೈಕ ಅಭಯಾರಣ್ಯವಾದ ಭೀಮಗಡ ಅಭಯಾರಣ್ಯದ ಕುರಿತು ಮಕ್ಕಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ದೂರದೃಷ್ಟಿಯಿಂದ ಹೆಮ್ಮಡಗಾ ಪ್ರಕೃತಿ ಶಿಬಿರವನ್ನು ಅಂದಿನ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಸತೀಶ ಜಾರಕಿಹೊಳಿರವರು 2014ರಲ್ಲಿಉದ್ಘಾಟಿಸಿದ್ದರು. ಶಿಬಿರವನ್ನು ಹಂತಹಂತವಾಗಿ ಅಭಿವೃದ್ಧಿ ಮಾಡಿದ ಅರಣ್ಯ ಇಲಾಖೆ ಶಿಬಿರವನ್ನು 2017-18ರಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದ್ದು, 2018 ರಿಂದ 2021 ರವರೆಗೆ ಪರಿಸರ ಅಭಿವೃದ್ಧಿ ಸಮಿತಿ ಮೂಲಕ ಅರಣ್ಯ ಇಲಾಖೆಗೆ ಅಂದಾಜು 7ಲಕ್ಷ ರೂ. ಆದಾಯ ಸಹ ಬಂದಿದೆ.
ಆದರೆ, 2021ರ ಮಾರ್ಚ್ ತಿಂಗಳಿನಲ್ಲಿ ಅರಣ್ಯ ಇಲಾಖೆ ಪ್ರಕೃತಿ ಶಿಬಿರದ ನಿರ್ವಹಣೆಯನ್ನು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಗೆ ಹಸ್ತಾಂತರಿಸಿದೆ. ಆದರೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಗೆ ಹಸ್ತಾಂತರ ಮಾಡಿದ ನಂತರ ಸಂಸ್ಥೆಗೆ ಹೇಳಿಕೊಳ್ಳುವ ಆದಾಯ ಬರದೇ ಶಿಬಿರ ನಷ್ಟದಲ್ಲಿದೆ ಎಂದು ಸ್ವತಃ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕರೇ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಶಿಬಿರದ ನಿರ್ವಹಣೆ ಅರಣ್ಯ ಇಲಾಖೆಯ ಕೈತಪ್ಪಿದ್ದರಿಂದ ಇಲಾಖೆಗೆ ಕಳೆದೆರಡು ವರ್ಷಗಳಲ್ಲಿ ಭೀಮಗಡ ಅಭಯಾರಣ್ಯದಲ್ಲಿ ಪರಿಸರ ಪ್ರವಾಸೋದ್ಯಮದಿಂದ ಯಾವುದೇ ಆದಾಯ ಬಂದಿಲ್ಲ. ಹಾಗೂ ಸಾವಿರಾರು ಪ್ರವಾಸಿಗರು ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮಗಳಿಂದ ವಂಚಿತರಾಗುತ್ತಿದ್ದು ಸಿಂಧನೂರು- ಹೆಮ್ಮಡಗಾ ಹೆದ್ದಾರಿ ಮೂಲಕ ಗೋವಾ ರಾಜ್ಯಕ್ಕೆ ಸಂಪರ್ಕಿಸುವ ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಇಲಾಖೆಗೆ ಸಾಕಷ್ಟು ಆದಾಯ ನಷ್ಟವಾಗುತ್ತಿದ್ದು ಸ್ಥಳೀಯರಿಗೂ ಇಲಾಖೆ ವತಿಯಿಂದ ಶಿಬಿರದಲ್ಲಿ ಉದ್ಯೋಗಾವಕಾಶ ನೀಡಲು ಸಾಧ್ಯವಾಗುತ್ತಿಲ್ಲ. ಹಾಗೂ ನಿಯಮಗಳ ಪ್ರಕಾರ ಶಿಬಿರವನ್ನು ಪರಿಸರ ಅಭಿವೃದ್ಧಿ ಮೂಲಕ ಅರಣ್ಯ ಇಲಾಖೆಯೇ ನಡೆಸಬೇಕಿದ್ದು, ಶಿಬಿರವನ್ನು ಅರಣ್ಯ ಇಲಾಖೆಗೆ ಪುನಃ ಹಸ್ತಾಂತರಿಸಬೇಕೆಂದು ಗಿರಿಧರ ಕುಲಕರ್ಣಿರವರು ಕಳೆದ ವರ್ಷ ಮೇ ತಿಂಗಳಿನಲ್ಲಿ ಕರ್ನಾಟಕ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದು ಈ ಮನವಿ ಮೇರೆಗೆ ಈ ವಿಷಯದ ಕುರಿತು ಅಭಿಪ್ರಾಯದ ವರದಿ ಸಲ್ಲಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಕಳೆದ ವರ್ಷ ಜುಲೈ ತಿಂಗಳಿನಲ್ಲಿಯೇ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಗಿರಿಧರ ಅವರ ಪ್ರಸ್ತಾವನೆಯನ್ನು ಅನುಮೋದಿಸಿ ಶಿಬಿರವನ್ನು ಅರಣ್ಯ ಇಲಾಖೆಗೆ ಪುನಃ ಹಿಂದಿರುಗಿಸುವುದು ಸೂಕ್ತವೆಂದು ಬೆಳಗಾವಿ ವಿಭಾಗದ ಡಿಸಿಎಫ್, ಖಾನಾಪುರ ಉಪವಿಭಾಗದ ಎಸಿಎಫ್ ಗೂ ಭೀಮಗಡ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳು ಕೂಡ ಕಳೆದ ವರ್ಷವೇ ಶಿಫಾರಸ್ಸುಮಾಡಿದ್ದರು. ಆದರೂ ಇಲ್ಲಿಯ ತನಕ ಶಿಬಿರವನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡುವ ಕುರಿತು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ತನ್ಮೂಲಕ ಜಿಲ್ಲೆಯ ಏಕೈಕ ಅಭಯಾರಣ್ಯದ ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮಗಳಿಂದ ಸಾವಿರಾರು ಪ್ರವಾಸಿಗರು, ಸಾರ್ವಜನಿಕರು ಹಾಗೂ ಮಕ್ಕಳು ವಂಚಿತರಾಗುತ್ತಿದ್ದು, ಇನ್ನೊಂದೆಡೆ ಪರಿಸರ ಪ್ರವಾಸೋದ್ಯಮ ಇಲ್ಲದೆ ಇರುವುದರಿಂದ ಅಭಯಾರಣ್ಯದಲ್ಲಿ ಇಲಾಖೆಯ ಆದಾಯ ಶೂನ್ಯವಾಗಿದೆ. ಪ್ರಮುಖವಾಗಿ ಸ್ಥಳೀಯರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ಆದ್ದರಿಂದ ಶಿಬಿರವನ್ನು ಅರಣ್ಯ ಇಲಾಖೆಗೆ ಪುನಃ ಹಸ್ತಾಂತರಿಸಲು ಸೂಕ್ತಕ್ರಮಕೈಗೊಳ್ಳಬೇಕೆಂದು ವನ್ಯಜೀವಿಸಂರಕ್ಷಣಾವಾದಿ ಗಿರಿಧರ ಕುಲಕರ್ಣಿರವರು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ