Kannada NewsKarnataka NewsLatest
33 ವರ್ಷ ಕನ್ನಡಿಗರ ಅನ್ನ ಉಂಡು ಕನ್ನಡಿಗರಿಗೇ ದ್ರೋಹ; ಬೆಳಗಾವಿ ಪಾಲಿಕೆ ನೌಕರನ ಪಿಂಚಣಿ ತಡೆ ಹಿಡಿಯಲು ಆಗ್ರಹ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 33 ವರ್ಷ ಕೆಲಸ ಮಾಡಿ ಮೇ 31 ರಂದು ನಿವೃತ್ತಿಯಾದ ದ್ವಿತೀಯ ದರ್ಜೆ.ಸಹಾಯಕನೋರ್ವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಕೊನೆಗೆ “ಜೈ ಮಹಾರಾಷ್ಟ್ರ”ಎಂದಿದ್ದಾನೆ.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಕುರಿತು ಹೇಳಿಕೆ ನೀಡಿದ್ದು, ನೌಕರನ ಪಿಂಚಣಿ ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇ 31 ರಂದು ಈ ಘಟನೆ ನಡೆದಿದೆ. 33 ವರ್ಷಗಳ ಕೆಲಸದ ನಂತರ ನಿವೃತ್ತಿಯಾದ ಶಿವಾಜಿ ಕಳಸೇಕರ ಅವರನ್ನು ಪಾಲಿಕೆಯ ಆಯುಕ್ತರ ಮತ್ತು ಅಧಿಕಾರಿಗಳ
ಸಮ್ಮುಖದಲ್ಲಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಳಸೇಕರ ಅವರು ಕೊನೆಗೆ ಜೈ ಮಹಾರಾಷ್ಟ್ರ ಎಂದು ಘೋಷಣೆ
ಹಾಕಿದರು! ಅಲ್ಲಿದ್ದ ಎಲ್ಲರಿಗೂ ಮುಜುಗರವಾಯಿತು. ಆದರೆ ಯಾರೂ ಅವರನ್ನು ಪ್ರಶ್ನಿಸಲಿಲ್ಲ. ಆಕ್ಷೇಪವೆತ್ತಲಿಲ್ಲ.
ನಿವೃತ್ತಿಯಾಗುವವರೆಗೂ ಕರ್ನಾಟಕದ ಹಾಗೂ ಕನ್ನಡಿಗರ ಅನ್ನ ಉಂಡ ಈ ನಾಡದ್ರೋಹಿ ನೌಕರನು
ಕೊನೆಗೆ ತನ್ನೊಳಗಿನ ಮಹಾರಾಷ್ಟ್ರ ಪರವಾದ ಮನೋ ಇಂಗಿತವನ್ನು ಹೊರಗೆಡಹಿದ್ದಾನೆ.
ಈ ಘಟನೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆಯಲ್ಲದೇ ಈ ನೌಕರನಿಗೆ ನೋಟೀಸು ನೀಡಿ ಕ್ಷಮಾಪಣೆ ಕೇಳಲು ತಿಳಿಸಬೇಕು.
ಕ್ಷಮಾಪಣೆ ಕೇಳುವವರೆಗೂ ಅವರ ಪಿಂಚಣಿಯನ್ನು ತಡೆ ಹಿಡಿಯಬೇಕು ಎಂದು ಚಂದರಗಿ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ