
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ನೋಟೋಸ್ ಹಿನ್ನಲೆಯಲ್ಲಿ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಹಾಗೂ ಯುವ ರಾಜಕಾರಣಿ ಯುವರಾಜ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಮೂವರು ವಿಚಾರಣೆಗೆ ಹಾಜರಾಗಿದ್ದು, ಈ ವೇಳೆ ಮಾತನಾಡಿದ ನಿರೂಪಕ ಅಕುಲ್, ನನಗೂ ಡ್ರಗ್ಸ್ ಕೇಸ್ ಗೂ ಯಾವುದೇ ಸಂಬಂಧವಿಲ್ಲ. ಆರೋಪಿ ಪ್ರತೀಕ್ ಶೆಟ್ಟಿ ನನಗೆ ಯಾರೆಂದು ಗೊತ್ತಿಲ್ಲ. ನನ್ನ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿಲ್ಲ. ಸಿಸಿಬಿ ವಿಚಾರಣೆಗೆ ಸಹಕರಿಸಲು ಸಿದ್ಧ ಎಂದರು.
ಈ ವೇಳೆ ಮಾತನಾಡಿದ ನಟ ಸಂತೋಷ್ ಆರ್ಯನ್, ಡ್ರಗ್ಸ್ ಪ್ರಕರಣದ ಆರೋಪಿ ವೈಭವ್ ಜೈನ್ ಜತೆ ನನಗೆ ಪರಿಚಯವಿದೆ ಎಂಬ ಕಾರಣಕ್ಕೆ ನನ್ನ ವಿಚಾರಣೆಗೆ ಕರೆಸಿರಬಹುದು. ಆದರೆ ಆತ ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿದ್ದಾನೆ ಎಂಬುದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ನಾನು ಆತನಿಗೆ ಕಪಾಳಕ್ಕೆ ಹೊಡೆಯುತ್ತಿದ್ದೆ. ಜೆ.ಡಿ ಗಾರ್ಡನ್ ನಲ್ಲಿರುವ ನನ್ನ ವಿಲ್ಲಾವನ್ನು ಆತ ನೋಡಿಕೊಳ್ಳುತ್ತಿದ್ದ. ಬಳಿಕ ಗಲಾಟೆಯಾಗಿ ನಾನೆ ಆತನನ್ನು ಬಿಡಿಸಿದ್ದೆ. ಅದಾದ ಬಳಿಕ ನನಗೆ ವೈಭವ್ ಜತೆ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದರು.